ಸಮ್ಮಿಶ್ರ ಸರ್ಕಾರ 20% ಕಮೀಷನ್ ಸರ್ಕಾರ ಯಡಿಯೂರಪ್ಪ ಆರೋಪ


15-03-2019 261

 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾರಾಯಣ ಬಿ.ಗೌಡ ಪಾಟೀಲ್‍ಗೆ ಸೇರಿದ 2 ಕೋಟಿ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವುದು ಸಮ್ಮಿಶ್ರ ಸರ್ಕಾರ 20% ಕಮೀಷನ್ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಆರೋಪ ಮಾಡಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಗುತ್ತಿಗೆದಾರರಿಂದ ಅಧಿಕಾರಿಗಳು ಹಣ ಸಂಗ್ರಹಿಸುತ್ತಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ಸರ್ಕಾರವನ್ನು 10% ಸರ್ಕಾರ ಎಂದು ಮೋದಿ ದೂರಿದ್ದರು. ಈಗ ಅಧಿಕಾರಿಯಿಂದಲೇ ಹಣ ಸಂಗ್ರಹಿಸಲಾಗುತ್ತಿದೆ ಎಂಬುದು ಐಟಿ ದಾಳಿಯಿಂದ ಸಾಬೀತಾಗಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 20% ಕಮೀಷನ್ ಸರ್ಕಾರ ಎಂದು ದೂರಿದರು.

ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಹಣವನ್ನು ನಿಮ್ಮ ಪಕ್ಷದ ವತಿಯಿಂದ ಕೊಡಬೇಕಿತ್ತು. ಅದನ್ನು ಬಿಟ್ಟು ಭ್ರಷ್ಟಾಚಾರ ಇಲ್ಲವೇ ವಾಮಮಾರ್ಗದ ಮೂಲಕ ಹಣ ಸಂಗ್ರಹಿಸಿ ಯಾವ ಪುರುಷಾರ್ಥಕ್ಕೆ ಕಾರ್ಯಕ್ರಮ ನಡೆಸುತ್ತೀರಿ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹೇಳುತ್ತಾರೆ.

ನಿಮ್ಮ ಕಾಲ ಬುಡದಲ್ಲೇ ಭ್ರಷ್ಟಾಚಾರ ನಡೆಯುವಾಗ ಇನ್ನು ಏಕೆ ತುಟಿ ಬಿಚ್ಚುತ್ತಿಲ್ಲ ಎಂದು ಹರಿಹಾಯ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೈರೇಗೌಡ ಇದಕ್ಕೆ ಸ್ಪಷ್ಟನೆ ಕೊಡಬೇಕು. ಎಲ್ಲದಕ್ಕೂ ನಾಜೂಕ್ಕಾಗಿ ಉತ್ತರ ಕೊಡುವುದನ್ನು ನಿಲ್ಲಿಸಬೇಕು. ನಿಮ್ಮ ಇಲಾಖೆಯಲ್ಲಿ ಇಷ್ಟು ಭ್ರಷ್ಟಾಚಾರ ನಡೆಯುತ್ತದೆ ಎಂದರೆ ಸರ್ಕಾರ ಯಾವ ರೀತಿ ನಡೆಯುತ್ತದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

# Coalition #Commission #Bsy #Government