ಗಂಡ ಸತ್ತ ತಿಂಗಳಿಗೆ ರಾಜಕೀಯ ಬೇಕಿತ್ತಾ? ನಾಲಿಗೆ ಹರಿಬಿಟ್ಟ ರೇವಣ್ಣ 


08-03-2019 596

ಒಂದೆಡೆ ಮಂಡ್ಯ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆಯುತ್ತಿದ್ದರೇ, ಇತ್ತ ಸಚಿವ ಎಚ್.ಡಿ.ರೇವಣ್ಣ ತಮ್ಮ ನಾಲಿಗೆ ಹರಿಬಿಡುವ ಮೂಲಕ ಸುದ್ದಿಯಾಗಿದ್ದಾರೆ.  ಮಹಿಳಾ ದಿನಾಚರಣೆಯಂದೇ ಎಚ್.ಡಿ.ರೇವಣ್ಣ ಹಿರಿಯ ನಟ ಅಂಬರೀಶ್ ಪತ್ನಿ ಹಾಗೂ ನಟಿ ಸುಮಲತಾ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದ್ದು, ರಾಜ್ಯದಾದ್ಯಂತ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ. 


ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ  ಪುತ್ರ ಅಭ್ಯರ್ಥಿಯಾಗಿರೋದರ ಬಗ್ಗೆ  ಖಾಸಗಿ ವಾಹಿನಿಯ ವಾಹಿನಿಯ ವರದಿಗಾರ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ ತಮ್ಮ ಹುದ್ದೆ, ಮಹಿಳೆಯರ ಘನತೆಯನ್ನು ಮರೆತು ಮಾತನಾಡಿದ ಸಚಿವ ರೇವಣ್ಣ, ಅವಳ್ಯಾರ್ರಿ ಸುಮಲತಾ ಗಂಡ ಸತ್ತು ಇನ್ನು ಒಂದು ತಿಂಗಳಾಗಿಲ್ಲ. ಆಗಲೇ ರಾಜಕೀಯಕ್ಕೆ ಬಂದಿದ್ದಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. 

ಈ ಹೇಳಿಕೆ ಇದೀಗ ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸುಮಲತಾ ಅವರ ಬಗ್ಗೆ ಅಗೌರವವಾಗಿ ಮಾತನಾಡಿದ ರೇವಣ್ಣ ವಿರುದ್ಧ ಮಹಿಳಾ ಸಂಘಟನೆಗಳು ಬೀದಿಗೀಳಿದು ಹೋರಾಟಕ್ಕೆ ಮುಂದಾಗಿವೆ. ಸಾಮಾಜಿಕ ಜಾಲತಾಣದಲ್ಲೂ ರೇವಣ್ಣ ಹೇಳಿಕೆಗೆ ತೀವ್ರ ಟೀಕೆಗೆ ವ್ಯಕ್ತವಾಗುತ್ತಿದೆ. ಕೇವಲ ತಮ್ಮ ಕುಟುಂಬ ರಾಜಕಾರಣವನ್ನು ಉಳಿಸಿ ಬೆಳೆಸುವುದಕ್ಕಾಗಿ ರೇವಣ್ಣನವರು ಹೆಣ್ಣುಮಕ್ಕಳ ಬಗ್ಗೆ ಇಷ್ಟು ಕೇವಲ ಮಾತನಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತಿದೆ.  

ಸುಮಲತಾ ರಾಜಕಾರಣಕ್ಕೆ ಕಾಲಿಟ್ಟಾಗಿನಿಂದಲೂ ಜೆಡಿಎಸ್ ವಿರೋಧಿಸುತ್ತಲೇ ಬಂದಿತ್ತು. ಜೆಡಿಎಸ್‍ನ ಹಲವು ಸಚಿವರು ಕೂಡ ಸುಮಲತಾ ವಿರುದ್ಧ ಕೀಳುಮಟ್ಟದ ಟೀಕೆ ಮಾಡುತ್ತಲೇ ಬಂದಿದ್ದರು. ಆದರೆ ಇವತ್ತು ರೇವಣ್ಣ ನೀಡಿರುವ ಹೇಳಿಕೆ ಕೇವಲ ಸುಮಲತಾ ಅವರಿಗೆ ಮಾತ್ರವಲ್ಲ ರಾಜ್ಯದ ವಿಧವೆಯರಿಗೆಲ್ಲರಿಗೂ ಸರ್ಕಾರ ಮಾಡಿದ ಅವಮಾನ ಎಂದು ಅರ್ಥೈಸಲಾಗುತ್ತಿದೆ. ಇನ್ನು ರೇವಣ್ಣ ಈ ಹೇಳಿಕೆಯನ್ನು ಜೆಡಿಎಸ್ ಮಹಿಳಾ ದಿನಾಚರಣೆಯ ಕೊಡುಗೆ ಎಂದು ಇತರ ಪಕ್ಷಗಳು ವ್ಯಂಗ್ಯವಾಡಿವೆ. 

ಆದರೆ ಎಚ್.ಡಿ.ರೇವಣ್ಣ ಈ ಕೀಳುಮಟ್ಟದ ಹೇಳಿಕೆಗೆ ಸುಮಲತಾ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅವರವರ ಹೇಳಿಕೆ, ಮಾತು ಅವರ ಸಂಸ್ಕಾರವನ್ನು ಬಿಂಬಿಸುತ್ತದೆ. ಇದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡರ್ ಪುತ್ರರಾಗಿ ಎಚ್.ಡಿ. ರೇವಣ್ಣ  ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಎಚ್.ಡಿ.ರೇವಣ್ಣ ಹೇಳಿಕೆ ಮಂಡ್ಯದ ಚುನಾವಣೆ ಮೇಲೆ ಹಾಗೂ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ ಎಂಬ ಮಾತು ಕೇಳಿಬಂದಿದೆ.
 
ಇನ್ನು ತಮ್ಮ ಹೇಳಿಕೆ ಬಗ್ಗೆ ಸ್ವಲ್ಪವೂ ಪಶ್ಚಾತಾಪ ವ್ಯಕ್ತಪಡಿಸದ ರೇವಣ್ಣ  ಕ್ಷಮೆ ಕೇಳಲು ಕೂಡ ನಿರಾಕರಿಸಿದ್ದು, ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಚುನಾವಣೆಗಾಗಿ ಕೀಳುಮಟ್ಟದ ರಾಜಕಾರಣ ಹಾಗೂ ಮಹಿಳೆಯರ ಬಗ್ಗೆ ಕೀಳುಅಭಿರುಚಿಯ ಹೇಳಿಕೆ ನೀಡುವ ಪ್ರವೃತ್ತಿ ಆರಂಭವಾಗಿದ್ದು, ಇದು ಯಾವ ಹಂತ ತಲುಪುತ್ತೆ, ರೇವಣ್ಣನವರ ಎಲುಬಿಲ್ಲದ ನಾಲಿಗೆಗೆ ಮಾಜಿ ಪ್ರಧಾನಿ  ದೇವೆಗೌಡ್ರರಾದರೂ ಕಡಿವಾಣ ಹಾಕ್ತಾರಾ ಕಾದು ನೋಡಬೇಕಿದೆ.  


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Revanna #Sumalatha #Karnataka # Low level