ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ


01-03-2019 707

ಲೋಕಸಭಾ ಚುನಾವಣೆಗೆ ಯಾವುದೇ ಸಂದರ್ಭದಲ್ಲಿ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ  ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಹಿತ ರಕ್ಷಿಸುವ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಯ್ದೆ ಜಾರಿಗೆ ಸಂಪುಟ ಅನುಮೋದನೆ ನೀಡಿದ ಹಿನ್ನಲೆಯಲ್ಲಿ ಕಾಯ್ದೆ ಜಾರಿಗೊಳಿಸಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅಧಿಕೃತ ಆದೇಶ ಜಾರಿ ಮಾಡಿದೆ.

ಪ್ರಸ್ತುತ ಹಿಂಬಡ್ತಿಗೆ ಒಳಗಾದ ಅಧಿಕಾರಿ/ನೌಕರರನ್ನು ಹಿಂದೆ ಧಾರಣ ಮಾಡಿದ ವೃಂದಗಳಿಗೆ ಮರು ನಿಯುಕ್ತಿಗೊಳಿಸುವುದು ಹಾಗೂ ವೃಂದ ಮತ್ತು ರಿಕ್ತ ಸ್ಥಾನಗಳು ಲಭ್ಯವಿಲ್ಲದಿದ್ದಲ್ಲಿ ಸರಿಸಮಾನ ಹುದ್ದೆಗಳನ್ನು ಸೃಜಿಸಿ ಹುದ್ದೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಹಿಂಬಡ್ತಿ ಹೊಂದಿದ ನಿಕಟಪೂರ್ವ ಹುದ್ದೆಗಳಲಿದ್ದ ವೃಂದಕ್ಕೆ ಹಿಂಬಡ್ತಿ ಹೊಂದಿದ ದಿನಾಂಕಕ್ಕೆ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಮರು ಸ್ಥಳ ನಿಯುಕ್ತಿಗೊಳಿಸುವ, ಸಮಾನಾಂತರ ಹುದ್ದೆಗಳನ್ನು ಸೃಜಿಸಿ ಅದರಲ್ಲಿ ಸ್ಥಳ ನಿಯುಕ್ತಿಗೊಳಿಸಲು ಕಾನೂನಿನ ಅಡಿ ಅವಕಾಶ ಕಲ್ಪಿಸಲಾಗಿದೆ.  

ವಿಶೇಷವೆಂದರೆ ಈ ಪ್ರಕ್ರಿಯೆಯಲ್ಲಿ ಪ್ರಸ್ತುತ ಸದರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವರ್ಗಕ್ಕೆ ಸೇರಿದ ಅಧಿಕಾರಿಯನ್ನು ಹಿಂಬಡ್ತಿಗೊಳಿಸಬಾರದು. ಆ ಮೂಲಕ ಅಲ್ಪ ಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ನೌಕರರ ಹುದ್ದೆಗಳಿಗೆ ತೊಂದರೆಯಾಗದಂತೆ ಕಾಯ್ದೆ ಜಾರಿಗೆ ನಿಯಮಗಳನ್ನು ಅಡಕಗೊಳಿಸಿ ಸರ್ಕಾರ ಆದೇಶಿಸಿದೆ.

ಎಸ್ಸಿ/ಎಸ್ಟಿ ಮೀಸಲಾತಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಕರ್ನಾಟಕ (ಸಿವಿಲ್ ಸೇವೆಗಳ) ಮೀಸಲಾತಿ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017ಕ್ಕೆ ರೂಪಿಸಿ ರಾಜ್ಯಪಾಲರಿಗೆ ರವಾನಿಸಿತ್ತು. ರಾಜ್ಯಪಾಲ ವಜೂಬಾಯಿ ಬಾಯಿ ವಾಲಾ ಅವರು ವಿಧೇಯಕಕ್ಕೆ ಅಂಕಿತ ಹಾಕದೆ ಅದನ್ನು ಯಥಾವತ್ತಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರವಾನಿಸಿದ್ದರು.

ರಾಷ್ಟ್ರಪತಿ ಕಾರ್ಯಾಲಯ ಗೃಹ ಸಚಿವಾಲಯ ಹಾಗೂ ಕಾನೂನು ಇಲಾಖೆ ಅಭಿಪ್ರಾಯ ಪಡೆದು ವಿಧೇಯಕ ಕ್ಕೆ ಅನುಮೋದನೆ ನೀಡಿದ್ದರು. ಆದರೆ ಬಿ.ಕೆ.ಪವಿತ್ರಾ ಪ್ರಕರಣ ಸುಪ್ರೀಂ ಕೋರ್ಟನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ವಿಧೇಯಕ ಜಾರಿಗೆ ರಾಜ್ಯ ಸರ್ಕಾರ ಹಿಂದೇಟು ಹಾಕಿತ್ತು.

ಅಂತೆಯೇ  ಅಲ್ಪ ಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದ ಸಮುದಾಯದ ನೌಕರರು ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿ ವಿಧೇಯಕ ಜಾರಿಗೆ ವಿರೋಧಿಸಿದ್ದರು. ಅಲ್ಲದೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ವಿಧೇಯಕ ಜಾರಿಗೆ ಅನುಮತಿ ನೀಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು.

ಸುಪ್ರೀಂ ಕೋರ್ಟ್ ಎಂ.ಎನ್.ನಾಗರಾಜ್ ಪ್ರಕರಣದಲ್ಲಿ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ನೀಡಿತ್ತು. ಜೊತೆಗೆ ಬಿ.ಕೆ.ಪವಿತ್ರ ಪ್ರಕರಣ ಇತ್ಯರ್ಥಗೊಳಿಸುವ ತನಕ ವಿಧೇಯಕ ಜಾರಿಗೊಳಿಸದಂತೆ ಅಹಿಂಸಾ ಸಂಘಟನೆ ಸರ್ಕಾರಕ್ಕೆ ಒತ್ತಡ ಹೇರಿತ್ತು.

ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ನಿರ್ಲಕ್ಷ್ಯವಹಿಸುತ್ತಿರುವ ಸರ್ಕಾರದ ಕ್ರಮಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರು ಅಸಮಾಧಾನಗೊಂಡಿದ್ದರು. ದಲಿತ ಸಮುದಾಯದ ಸಚಿವರ ಮೇಲೆ ನಿರಂತರ ಒತ್ತಡ ಹೇರುವ ಮೂಲಕ ಕಾಯ್ದೆ ಜಾರಿಗೆ ಆಗ್ರಹಿಸಿದ್ದರು.

ಅಂತಿಮವಾಗಿ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಧೇಯಕ ಜಾರಿಗೆ ಸಮ್ಮತಿ ನೀಡಿದೆ ಎನ್ನಲಾಗಿದೆ. ಆ ಮೂಲಕ ಎಸ್ಸಿ/ಎಸ್ಟಿ ನೌಕರರ ಹಿತ ರಕ್ಷಣೆ ಮಾಡುವ ಜೊತೆಗೆ ಕಾಂಗ್ರೆಸ್ ಮತಬ್ಯಾಂಕ್ ಗಳನ್ನು ಉಳಿಸಿಕೊಳ್ಳುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಕಾಯ್ದೆ ಜಾರಿಯಿಂದಾಗಿ ತಡೆ ಹಿಡಿಯಲಾಗಿದ್ದ 3,799 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರಿಗೆ ಮುಂಬಡ್ತಿ ಸಿಗಲಿದೆ. ಅಂತಯೇ ಹಿಂಬಡ್ತಿ ಪಡೆದಿದ್ದ ನೌಕರರ ಜೇಷ್ಟತಾ ಪಟ್ಟಿಯನ್ನು ಆದಷ್ಟು ಶೀಘ್ರವಾಗಿ ಸಿದ್ದಪಡಿಸಿ ಅನುಮೋದನೆ ನೀಡುವಂತೆ ಸರ್ಕಾರದ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಿದೆ.

ಅಹಿಂಸಾ ಸಮುದಾಯಗಳ ನೌಕರ ಹುದ್ದೆಗಳಿಗೆ ವಿಧೇಯಕ ಜಾರಿಯಿಂದ ಸಮಸ್ಯೆ ಎದುರಾಗದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ ಹಿನ್ನಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿಸುತ್ತಿರುವ 10 ಸಾವಿರಕ್ಕೂ ಹೆಚ್ಚು ಎಸ್ಸಿ/ಎಸ್ಟಿ ಸಮುದಾಯದ ನೌಕರರಿಗೆ ಬಡ್ತಿ ಮೀಸಲಾತಿ ಸೌಲಭ್ಯ ಅನ್ವಯಿಸುವ ಇನ್ನಷ್ಟು ಸಮಯಾವಕಾಶ ಅಗತ್ಯ ಇದೆ ಎನ್ನಲಾಗಿದೆ.

ಒಟ್ಟಾರೆ ವಿಧೇಯಕ ಜಾರಿ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಹಿತ ರಕ್ಷಣೆಯ ಜೊತೆಗೆ ಅಹಿಂಸಾ ಸಮುದಾಯಗಳ ನೌಕರರ ಹಿಂಬಡ್ತಿ ಅಥವಾ ಮುಂಬಡ್ತಿಗೆ ಅಡ್ಡಿಯಾಗದಂತೆ ಕಾಯ್ದೆ ಜಾರಿ ಅನುಷ್ಟಾನಗೊಳಿಸಿರುವ ತಂತ್ರ ಎಲ್ಲರನ್ನೂ ಸಮಾಧಾನಪಡಿಸುವ ಲೆಕ್ಕಚಾರವಾಗಿದೆ.

ಸುಪ್ರಿಂ ಕೋರ್ಟ್ ಬಿ.ಕೆ.ಪವಿತ್ರಾ ಪ್ರಕರಣದಲ್ಲಿ ನೀಡುವ ತೀರ್ಪಿಗೆ ಒಳಪಟ್ಟು ವೃಂದ ಮತ್ತು ನೇಮಕಾತಿ ನಿಯಮಾವಳಿ ಅಡಿಯಲ್ಲಿ ಬಡ್ತಿ ಮೀಸಲಾತಿ ಜಾರಿಗೊಳಿಸುವ ಮೂಲಕ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Karnataka # Promotion Act #Government # Implement