ಲೋಕಸಭೆ ಚುನಾವಣೆಯಲ್ಲಾದ್ರೂ ಗೆಲ್ತಾರಾ ಮಧು ಬಂಗಾರಪ್ಪ? 


25-02-2019 610

ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಇಬ್ಬರು ಮಾಜಿ ಸಿಎಂ ಪುತ್ರರ ಕದನಕ್ಕೆ ಸಾಕ್ಷಿಯಾಗುವ ಮುನ್ಸೂಚನೆ ಲಭ್ಯವಾಗಿದೆ. ಹೌದು ಶಿವಮೊಗ್ಗ ಕ್ಷೇತ್ರದಿಂದ ಮೈತ್ರಿ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದ್ದು, ಮೈತ್ರಿ ಮಾತುಕತೆ, ಕ್ಷೇತ್ರಗಳ ಹಂಚಿಕೆಗೂ ಮುನ್ನವೇ ಅಭ್ಯರ್ಥಿ ಆಯ್ಕೆಯಾಗಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 

ಮಧು ಬಂಗಾರಪ್ಪ 2018 ರ ವಿಧಾನಸಭೆ ಚುನಾವಣೆಯಲ್ಲಿ  ಸ್ಪರ್ಧಿಸಿ ತಮ್ಮ ಸಹೋದರನಿಂದಲೇ ಸೋಲು ಕಂಡಿದ್ದರು. ಆ ವೇಳೆ ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಪಕ್ಷದಲ್ಲಿ ಕಾರ್ಯಕರ್ತನಾಗಿದ್ದುಕೊಂಡು ಪಕ್ಷ ಬಲಪಡಿಸುತ್ತೇನೆ ಎಂದಿದ್ದರು. ಅಲ್ಲದೆ ಶಿವಮೊಗ್ಗ ಕ್ಷೇತ್ರದಲ್ಲಿ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸಹೋದರಿ ಹಾಗೂ ನಟ ಶಿವರಾಜ ಕುಮಾರ ಪತ್ನಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿ ಸೋಲುಂಡಿದ್ದರು. ಇದೀಗ ಮತ್ತೊಮ್ಮೆ ಮಾಜಿ ಸಿಎಂಪುತ್ರ ಮಧು ಬಂಗಾರಪ್ಪ ತಾಯ್ನೆಲದಲ್ಲೇ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಬಿಎಸ್‍ವೈ ಪುತ್ರ ಮತ್ತು ಮಧು ನಡುವೆ ಜಂಗಿ ಕುಸ್ತಿ ನಡೆಯುವ ಸಾಧ್ಯತೆ ಇದೆ. 

ಬಿ.ಎಸ್.ವೈ ಪುತ್ರ ಬಿ.ವೈ.ರಾಘವೇಂದ್ರ ಪ್ರಸ್ತುತ ಎಂಪಿಯಾಗಿರುವುದು ಬಿಜೆಪಿಯ ರಾಜಕೀಯ ಲೆಕ್ಕಾಚಾರವನ್ನು ಬಲಗೊಳಿಸಿದ್ರೆ,  ಮಧು ಬಂಗಾರಪ್ಪ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದು, ಕಳೆದ ಬಾರಿ ಗೀತಾ ಸೋಲು, ಬಂಗಾರಪ್ಪನವರ ಇಬ್ಬರು ಮಕ್ಕಳಲ್ಲಿರುವ ದಾಯಾದಿ ದ್ವೇಷ ಇದೆಲ್ಲವೂ ಕೂಡ ಮಧು ಗೆಲುವಿನ ಮೇಲೆ ಪ್ರಭಾವ ಬೀರುವ ಅಂಶಗಳಾಗಿವೆ.

ಆದರೂ ಜೆಡಿಎಸ್ ಅಭ್ಯರ್ಥಿ ಆಯ್ಕೆಗಾಗಿ ನಡೆಸಿದ ಮೊದಲನೇ ಸುತ್ತಿನ ಸಭೆಯಲ್ಲೇ ಮಧು ಹೆಸರನ್ನು ಅಂತಿಮಗೊಳಿಸಿದ್ದು,  ಸಿಎಂ ಕುಮಾರಸ್ವಾಮಿ ಹಾಗೂ ಶಾಸಕರು ಪಾಲ್ಗೊಂಡ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದೆ ಎಂಬ ಅಂಶವನ್ನು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲದೇ ಸಿಎಂ ಕುಮಾರಸ್ವಾಮಿ ತಮ್ಮ ಚುನಾವಣಾ ಪ್ರಚಾರವನ್ನು  ಶಿವಮೊಗ್ಗದಿಂದಲೇ ಆರಂಭಿಸಲು ಕೂಡ ನಿರ್ಧರಿಸಿದ್ದು, ಈ ಬಗ್ಗೆ ಪಕ್ಷದ ನಾಯಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಕುಮಾರಸ್ವಾಮಿ ಶಿವಮೊಗ್ಗವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದು, ಬಿಎಸ್‍ವೈ ಪುತ್ರನನ್ನು ಸೋಲಿಸಲು ಪಣತೊಟ್ಟಿದ್ದಾರೆ ಎನ್ನಲಾಗುತ್ತಿದೆ. 

ಈ ಮಧ್ಯೆ ಮಧು ಸಹೋಧರಿ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜಕುಮಾರ್ ಹಲವಾರು ಬಾರಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದರು.ಹೀಗಾಗಿ ಕಾಂಗ್ರೆಸ್‍ನಿಂದಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಇದೀಗ ಮಧು ಮೈತ್ರಿ ಸರ್ಕಾರದ ಪರ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. 
ಮಧು ರಾಜಕೀಯ ಭವಿಷ್ಯದಲ್ಲಿ ಈ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಸಾಲು-ಸಾಲು ಸೋಲಿನಿಂದ ಕಂಗೆಟ್ಟಿರುವ ಮಧು ಈ ಚುನಾವಣೆಯಲ್ಲೂ ಸೋತರೇ ಜೆಡಿಎಸ್‍ನಲ್ಲಿ ಮೂಲೆಗುಂಪಾಗೋದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ  ಲೋಕಸಭಾ ಸ್ಥಾನಗಳನ್ನು ಪಡೆದುಕೊಳ್ಳಲು ಜೆಡಿಎಸ್ ಸಾಕಷ್ಟು ಸರ್ಕಸ್ ನಡೆಸಿದೆ. ಅದರಲ್ಲೂ ಶಿವಮೊಗ್ಗ ಕರ್ನಾಟಕದ ಪ್ರತಿಷ್ಠೆಯ ಕಣವಾಗಿರೋದರಿಂದ ಅಲ್ಲಿನ ಸೋಲು ಜೆಡಿಎಸ್‍ಗೆ ಮುಖಭಂಗ ತರೋದು ಗ್ಯಾರಂಟಿ. ಹೀಗಾಗಿ ಮಧು ಬಂಗಾರಪ್ಪ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದ್ದು, ಲೋಕಸಭೆ ಚುನಾವಣೆಯಲ್ಲಿ ಸಿಎಂ ಮಕ್ಕಳ  ಗುದ್ದಾಟದಲ್ಲಿ ಗದ್ದುಗೆ ಏರೋದ್ಯಾರು ಅನ್ನೋದು ಸಧ್ಯದ ಕುತೂಹಲ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Karnataka #Shivmogga #Madhu Bangarappa #Loksabhe