ಜೆ.ಡಿ.ನಾಯಕ್ ಬಿಜೆಪಿ ತೊರೆದು  ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ


20-02-2019 342

ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಜೆ.ಡಿ.ನಾಯಕ್ ಬಿಜೆಪಿ ತೊರೆದು  ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ತತ್ವ ಸಿದ್ದಾಂತಗಳು, ಉಸಿರುಗಟ್ಟಿಸುವ ವಾತಾವರಣ, ಅಲ್ಲಿನ ನಾಯಕತ್ವವನ್ನು ವಿರೋಧಿಸಿ ಕಾಂಗ್ರೆಸ್ ಸೇರಿದ್ದು, ಮತ್ತೊಮ್ಮೆ ಬಿಜೆಪಿ ಸೇರುವ ತಪ್ಪು ಮಾಡುವುದಿಲ್ಲ. ಕಮಲ ಪಕ್ಷ ಸೇರಿ ತಮಗೆ ಪಶ್ಚಾತ್ತಾಪ ಆಗಿದೆ ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಜೆ.ಡಿ.ನಾಯಕ್‍ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್ ಪಕ್ಷದ ಬಾವುಟ ನೀಡಿ ಕಾಂಗ್ರೆಸ್ ಗೆ ಬರಮಾಡಿಕೊಂಡರು.

ಈ ವೇಳೆ ಜೆ.ಡಿ.ನಾಯಕ್‍ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವವರ ಅಗತ್ಯವಿದೆ. ಐದು ಬಾರಿ ಅನಂತ್  ಕುಮಾರ್  ಹೆಗಡೆ ಅಲ್ಲಿಂದ ಗೆದ್ದಿರುವುದು ದುರ್ದೈವದ ಸಂಗತಿ ಎಂದರು.

ಎರಡು  ಬಾರಿ ಚುನಾವಣೆಯಲ್ಲಿ ಗೆದ್ದು, ಎರಡು ಬಾರಿ ಸೋತಿದ್ದೇನೆ. ಬಿಜೆಪಿಗೆ ಸೇರಿದ ಬಳಿಕ ಅಲ್ಲಿನ ಕೋಮುವಾದ, ದ್ವೇಷದ ರಾಜಕಾರಣದಿಂದ ಬೇಸತ್ತು ಹೊರ ಬಂದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಎಂದು ಹೇಳಿದರು.  

ಜೀವನದಲ್ಲಿ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ. ಜೀವನದಲ್ಲಿ ಮತ್ತೆ ಎಂದಿಗೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. 2018 ರಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು 6 ತಿಂಗಳು ಬಿಜೆಪಿಯಲ್ಲಿದ್ದೆ. ಆದರೆ ನನಗೆ ಅಲ್ಲಿರಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಹೇಳಿದರು.  
 
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ದಲಿತರು, ಹಿಂದುಳಿದವರ ಪರ ಬಿಜೆಪಿಗೆ ಒಲವಿಲ್ಲ. ಹೀಗಾಗಿ ಜೆ.ಡಿ.ನಾಯಕ್‍ ಮತ್ತೆ ಪಕ್ಷಕ್ಕೆ ವಾಪಸಾಗಿದ್ದಾರೆ, ಅವರ ವಾಪಸಾತಿಯಿಂದ ಕಾಂಗ್ತೆಸ್ ಗೆ ಮತ್ತಷ್ಟು ಬಲ ಬಂದಿದೆ, ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ಜೆ.ಡಿ. ನಾಯಕ್‍ ಪಕ್ಷಕ್ಕೆ ಬಂದಿರುವುದು ಸಹಕಾರಿಯಾಗಲಿದೆ ಎಂದರು.

ಅನಂತ್ ಕುಮಾರ್ ಹೆಗಡೆ ಕ್ಷೇತ್ರದ ಅಭಿವೃದ್ಧಿಗೆ ಏನೂ ಮಾಡಿಲ್ಲ. ಇಂತಹ ಒಬ್ಬ ಸಂಸದ ಅಲ್ಲಿ ಐದೈದು ಬಾರಿ ಗೆದ್ದಿರುವುದು ದುರಾದೃಷ್ಟಕರ. ಅವರನ್ನು ಬದಲಾಯಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Bjp #J.D.Nayak #Congress #Ananth Kumar Hegde