ಮುಸ್ಲಿಂರ ಬಗ್ಗೆ ಮಾತನಾಡಿದರೇ ಜೀವ ತೆಗೆಯುತ್ತೇವೆ, ಕೇಂದ್ರ ಸಚಿವರಿಗೆ ಜೀವ ಬೆದರಿಕೆ!


18-02-2019 482

ಅತ್ತ ಭಯೋತ್ಪಾದಕರು ನಡೆಸಿದ ಕೃತ್ಯಗಳಿಂದ ರಾಷ್ಟ್ರ ನಲುಗಿ ಹೋಗಿದ್ದು, ಸೈನಿಕರ ತ್ಯಾಗ-ಬಲಿದಾನಕ್ಕೆ ದೇಶದಾದ್ಯಂತ ಸಂತಾಪ ವ್ಯಕ್ತವಾಗುತ್ತಿದ್ದರೇ, ಇತ್ತ ಸದಾಕಾಲ ಮುಸ್ಲಿಂರ ವಿರುದ್ಧ ವಾಗ್ದಾಳಿ ನಡೆಸುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಜೀವಬೆದರಿಕೆ ಎದುರಾಗಿದೆ. ಅವರ ನಿವಾಸಕ್ಕೆ ದೂರವಾಣಿ ಕರೆ ಮಾಡಿದ ಆಗಂತುಕರು ಮುಸ್ಲಿಂಮರ ಬಗ್ಗೆ ಮಾತನಾಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದು, ಆತಂಕ ಮೂಡಿಸಿದೆ. 

ನಿನ್ನೆ ಮಧ್ಯರಾತ್ರಿ 1.45 ರ ಸುಮಾರಿಗೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕೆಎಚ್‍ಬಿ ಕಾಲೋನಿ ಬಳಿ ಇರುವ ಅವರ ನಿವಾಸದ ಲ್ಯಾಂಡ್ ಲೈನ್‍ಗೆ 0022330000 ನಂಬರ್‍ನಿಂದ ಅನಾಮಿಕ ಕರೆ ಬಂದಿದೆ. ಈ ವೇಳೆ ಕೇಂದ್ರ ಸಚಿವ ಹೆಗಡೆ ಮನೆಯಲ್ಲಿ ಇಲ್ಲದ ಕಾರಣ ಅವರ ಪತ್ನಿ ರೂಪಾ ಕರೆ ಸ್ವೀಕರಿಸಿದ್ದರು. ಈ ವೇಳೆ ಅತ್ತ ಕಡೆಯಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಯೂ,  ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಇರಬೇಕು. ಮುಸ್ಲಿಂಮರ ಬಗ್ಗೆ ಮಾತನಾಡಿದರೆ ನಿಮ್ಮನ್ನು ನಿಮ್ಮ ಕುಟುಂಬವನ್ನು  ಬಿಡುವುದಿಲ್ಲ. ಜೀವ ತೆಗೆಯುತ್ತೇವೆ. ಅಯೋಧ್ಯೆಯು ನಿಮಗೆ ಬೇಕಾ ಅದನ್ನು ಬಿಡುವುದಿಲ್ಲ. ನಿಮ್ಮ ಜೀವ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. 

ಕರೆ ಮಾಡಿದ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ರೂಪಾ ಅವರು ದೂರವಾಣಿ ಕರೆ ಕಟ್ ಮಾಡಿದ್ದಾರೆ.  ಬಳಿಕವೂ ಹಲವು ಬಾರಿ ಇದೆ ಸಂಖ್ಯೆಯಿಂದ ಕರೆ ಬಂದಿದೆ. ಈ ಬಗ್ಗೆ ಸಚಿವರ ಆಪ್ತ ಸಹಾಯಕ ಸುರೇಶ್ ಶೆಟ್ಟಿ ತಡರಾತ್ರಿಯೇ ಪೊಲೀಸ್ ಠಾಣೆಣೆ ತೆರಳಿ ದೂರು ನೀಡಿದ್ದಾರೆ. ಈ ಹಿಂದೆಯೂ ಹಲವಾರಿ ಬಾರಿ ಅನಂತಕುಮಾರ ಹೆಗಡೆಯವರ ನಿವಾಸಕ್ಕೆ ಬೆದರಿಕೆ ಕರೆಗಳು ಬಂದಿವೆ. ಅಲ್ಲದೆ ಕೆಲ ತಿಂಗಳುಗಳ ಹಿಂದೆ ಅನಂತಕುಮಾರ್ ಹೆಗಡೆ ಬೆಂಗಾವಲು ವಾಹನಕ್ಕೆ ಲಾರಿಯೊಂದು ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ಅಪಘಾತ ಕೂಡ ಅನಂತಕುಮಾರ ಹತ್ಯೆಯ ಸಂಚು ಎಂಬ ಮಾತು ಕೇಳಿಬಂದಿತ್ತು. 

ಚುನಾವಣೆ ಸೇರಿದಂತೆ ಹಲವಾರು ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮುಸ್ಲಿಂರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದು, ಜಗತ್ತಿನಲ್ಲಿ ಮುಸ್ಲಿಂ ಧರ್ಮ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ಇದೀಗ  ಅತ್ತ ಗಡಿಯಲ್ಲಿ ಯೋಧರ ಮಾರಣಹೋಮ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಬೆದರಿಕೆ ಕರೆ ಬಂದಿರೋದು ಆತಂಕಕ್ಕೆ ಕಾರಣವಾಗಿದ್ದು, ಸಚಿವರಿಗೆ ಭದ್ರತೆ ಹೆಚ್ಚಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Talking Muslim #Central Minister #Threat Call #Ananth Kumar Hegde