ಸುಪ್ರೀಂನಲ್ಲಿ ರಾಜೀವ್‍ಗೆ ರಿಲೀಫ್- ದೀದಿಗೆ ನೋಟಿಸ್


05-02-2019 309

ಮೊನ್ನೆಯಿಂದ ದೇಶದಾದ್ಯಂತ ಚರ್ಚೆಗೊಳಗಾಗಿದ್ದ ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೈಡ್ರಾಮಾದಲ್ಲಿ ದೀದಿಗೆ ಸುಪ್ರೀಂ ಕೋರ್ಟ್ ತೀರ್ಪು ನೈತಿಕ ಗೆಲುವು ನೀಡಿದೆ.  ಶಾರದಾ ಚಿಟ್ ಫಂಡ್ ಹಾಗೂ ರೋಸ್ ವ್ಯಾಲಿ ಆರ್ಥಿಕ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ನಗರಪೊಲೀಸ್ ಆಯುಕ್ತ ರಾಜೀವ್ ಕುಮಾರ್‍ರನ್ನು ಸಿಬಿಐ ವಿಚಾರಣೆ ನಡೆಸಬಹುದು ಆದರೆ ಬಂಧಿಸುವಂತಿಲ್ಲ ಎಂದು ಆದೇಶಿಸಿದ್ದು, ಪಶ್ಚಿಮಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

ರವಿವಾರ ಸುಪ್ರೀಂ ಅನುಮತಿ ಮೇರೆಗೆ ರಾಜೀವ್ ಕುಮಾರ್ ವಿಚಾರಣೆಗೆ ಆಗಮಿಸಿದ ಸಿಬಿಐ ಅಧಿಕಾರಿಗಳನ್ನೇ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು. ಅಲ್ಲದೆ ಸಿಎಂ ಮಮತಾ ಬ್ಯಾನರ್ಜಿ ರಾಜೀವ್ ಕುಮಾರ್ ನಿವಾಸಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು. ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‍ಗೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು. ತುರ್ತು ವಿಚಾರಣೆಗೆ ಕೋರಿದ್ದರೂ ಸುಪ್ರೀಂ ಪ್ರಕರಣದ ವಿಚಾರಣೆ ಇಂದು ಮುಂಜಾನೆ ನಡೆಸಿದ್ದು, ರಾಜೀವ್ ಕುಮಾರ್ ಸಿಬಿಐ ವಿಚಾರಣೆಗೆ ಹಾಜರಾಗಬೇಕೆಂಬ ಆದೇಶ ನೀಡಿದೆ. 
ಇದಕ್ಕೂ ಮೊದಲು ಪ್ರಕರಣದ ಕುರಿತು ಪಶ್ಚಿಮಬಂಗಾಳ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಡಿಜಿಪಿ ಅವರು ಫೆಬ್ರವರಿ 18ಕ್ಕೂ ಮುನ್ನ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಬೇಕೆಂದು ಆದೇಶಿಸಿದೆ. ರಾಜೀವ್ ಕುಮಾರ್ ಶಿಲೋಂಗ್‍ನಲ್ಲಿ ವಿಚಾರಣೆಗೆ ಹಾಜರಾಗಬೇಕಿದ್ದು, ಡಿಜಿಪಿ ಹೇಳಿಕ ನೀಡಿದ ಬಳಿಕ ರಾಜೀವ್ ಕುಮಾರ್‍ಗೆ ವಿಚಾರಣೆಗೆ ಹಾಜರಾಗಲು ಸೂಚಿಸುವ ಸಾಧ್ಯತೆ ಇದೆ. 
ಇನ್ನು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಇದುನನ್ನ ನೈತಿಕ ಗೆಲುವು.  ವಿಚಾರಣೆಗೆ ಸಹಕರಿಸುವುದಿಲ್ಲ ಎಂದು ರಾಜೀವ್ ಕುಮಾರ್ ಎಂದೂ ಹೇಳಿಲ್ಲ. ಆದರೆ ಸಿಬಿಐ ಅವರನ್ನು ಬಂಧಿಸುವದಕ್ಕಾಗಿಯೇ ಬಂದಿತ್ತು. ಅದಕ್ಕಾಗಿ ನನ್ನ ವಿರೋಧವಿದೆ. ಈಗ ನ್ಯಾಯಾಲಯ ಬಂಧಿಸಬಾರದೆಂದು ಆದೇಶಿಸಿದೆ ಎಂದರು. 
ಸಿಬಿಐ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಕ್ರಮ ಖಂಡಿಸಿ ಸಿಬಿಐ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#West Bengal #Deedi #Supreem Court #Rajeev Kumar