ಅತೃಪ್ತರ ಹಟ  ಕಾಂಗ್ರೆಸ್ ಸಚಿವರಿಗೆ ಸಂಕಟ? 


16-01-2019 217

ಅತ್ತ ಬಿಜೆಪಿ ಸರ್ಕಾರ ಉರುಳಿಸುವ ಪ್ರಯತ್ನ ಮುಂದುವರೆಸಿದ್ದರೇ, ಇತ್ತ ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಸ್ವತಃ ರಾಹುಲ್ ಗಾಂಧಿಯವರೆ ಕಣಕ್ಕಿಳಿದಿದ್ದು, ಹಾಲಿ ಸಚಿವರಿಂತ ರಾಜೀನಾಮೆ ಪಡೆದು, ಅತೃಪ್ತರಿಗೆ ಹುದ್ದೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಬಂಡಾಯ ಶಾಸಕರ ಮನವೊಲಿಸಲು ಹಾಲಿ ಸಚಿವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದ್ದು, ಕಾಂಗ್ರೆಸ್ ತುರ್ತು ಸಭೆ ಆರಂಭಿಸಿದೆ. 

ಕಾಂಗ್ರೆಸ್‍ನ ಐವರು  ಅತೃಪ್ತರು ಶಾಸಕರು ಪಕ್ಷ ತೊರೆದು ಬಿಜೆಪಿಗೆ ಬೆಂಬಲ ನೀಡಲು  ಯತ್ನಿಸುತ್ತಿದ್ದಾರೆ ಎಂಬ ಸಂಗತಿ ಕಾಂಗ್ರೆಸ್ ಹೈಕಮಾಂಡ್ ಎದೆಯಲ್ಲೂ ನಡುಕ ಮೂಡಿಸಿದೆ. ಹೀಗಾಗಿ ಶತಾಯ-ಗತಾಯ ಎಮ್‍ಎಲ್‍ಎಗಳನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿರುವ ರಾಹುಲ್ ಗಾಂಧಿ ಕರ್ನಾಟಕದ ಕಾಂಗ್ರೆಸ್ ವರಿಷ್ಠರಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಏನಾದ್ರು ಮಾಡಿ ಎಮ್‍ಎಲ್‍ಎ ಹಾಗೂ ಸರ್ಕಾರ ಎರಡನ್ನೂ ಉಳಿಸಿಕೊಳ್ಳಿ ಎಂದಿದ್ದಾರೆ ಎನ್ನಲಾಗುತ್ತಿದೆ. 

ಹೀಗಾಗಿ ರಾಜ್ಯ ಕಾಂಗ್ರೆಸ್ ಹಾಲಿ ಸಚಿವರನ್ನು ಬಲಿಕೊಟ್ಟಾದರೂ ಅತೃಪ್ತರನ್ನು ಉಳಿಸಿಕೊಳ್ಳಲು ಮುಂಧಾಗಿದೆ. ಈ ಬಗ್ಗೆ ಈಗಾಗಲೆ ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್, ಸಿದ್ಧರಾಮಯ್ಯ, ಪರಮೇಶ್ವರ್, ಸೇರಿದಂತೆ ಹಲವು ನಾಯಕರು ಸಭೆ ನಡೆಸಿದ್ದು, ಸಭೆಯಲ್ಲಿ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಕೃಷ್ಣ ಭೈರೈಗೌಡ್ ಹಾಗೂ ಪ್ರಿಯಾಂಕ್ ಖರ್ಗೆ ತಮ್ಮ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. 
ಈ ಸ್ಥಾನಗಳಲ್ಲಿ ನಾಲ್ವರು ಅತೃಪ್ತ ಶಾಸಕರಾದ ಹಗರಿಬೊಮ್ಮನಳ್ಳಿಯ ಭೀಮಾ ನಾಯ್ಕ್, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಬಳ್ಳಾರಿಯ ಗ್ರಾಮಾಂತರದ ಶಾಸಕ ನಾಗೇಂದ್ರ, ಮುಳಬಾಗಿಲು ಕ್ಷೇತ್ರದ ಎಚ್. ನಾಗೇಶ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಆದರೆ ಹೀಗೆ ಅಧಿಕಾರದ ಆಸೆಗೆ ಹಿರಿಯ ಸಚಿವರನ್ನು ಸ್ಥಾನದಿಂದ ಕೆಳಗಿಳಿಸಿ  ಕಿರಿಯರಿಗೆ ಅವಕಾಶ ನೀಡಿದರೇ ಆಗಬಹುದಾದ ಪರಿಣಾಮಗಳ ಬಗ್ಗೆಯೂ ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ರೀತಿ ಹಟ ಹಿಡಿದು ಕೂತವರನ್ನು ಕಾಂಗ್ರೆಸ್ ಮನವೊಲಿಸುವ ಪ್ರವೃತ್ತಿ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರು ಸಚಿವ ಸ್ಥಾನಕ್ಕೆ ಹಟ ಹಿಡಿಯಬಹುದು. ಇದು ಸಮ್ಮಿಶ್ರ ಸರ್ಕಾರದ ಭವಿಷ್ಯಕ್ಕೆ ಮಾರಕ ಎಂಬುದನ್ನು ಕಾಂಗ್ರೆಸ್ ಮರೆಯಬಾರದು ಅಂತಿದ್ದಾರೆ ರಾಜಕೀಯ ತಜ್ಞರು. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Congress Mla #Ministry #Karnataka #Fight