"ಲಂಬೋದರ್" ನಾಗಿ ಯಶಸ್ಸು ಕಾಣ್ತಾರಾ ಯೋಗಿ?


09-01-2019 165

ಲಂಬೋದರ್ ಚಿತ್ರದ ಮೂಲಕ  ನಟ ಲೂಸ್‍ಮಾದ ಖ್ಯಾತಿಯ ಯೋಗೀಶ್ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2012 ರಲ್ಲಿ ಬಿಡುಗಡೆಯಾದ ಸಿಂದ್ಲಿಂಗು ಚಿತ್ರದ ಬಳಿಕ ಯೊಗೀಶ್ ಬಹುತೇಕ ನಾಪತ್ತೆಯಾಗಿದ್ದರು. ಇದೀಗ ಮತ್ತೊಂದು ಕಾಮಿಡಿ ಚಿತ್ರದ ಮೂಲಕ ತೆರೆಗೆ ಬರ್ತಿದ್ದಾರೆ. ಕನ್ನಡದ ಬಹುಕೋಟಿ ಚಿತ್ರಗಳು ಹಾಗೂ ಸ್ಟಾರ್ ಅಬ್ಬರಗಳ ನಡುವೆ ತೆರೆಗೆ ಬರ್ತಿರೋ ಈ ಚಿತ್ರ ಪೇಕ್ಷಕರನ್ನು ಸೆಳೆಯದೇ ಇದ್ದಲ್ಲಿ ಲೂಸ್ ಮಾದನ  ಸಿನಿ ಜರ್ನಿ ಸಂಕಷ್ಟಕ್ಕೆ ಸಿಲುಕೋದು  ನಿಶ್ಚಿತ.

ಜನವರಿ 11 ರಂದು ತೆರೆಗೆ ಬರುತ್ತಿರುವ ಲಂಬೋದರ್ ಚಿತ್ರ, ತಾವು ಸಿದ್ದಿಂಗ್ಲು ಬಳಿಕ ನಟಿಸಿರುವ ಪೂರ್ತಿ ಪ್ರಮಾಣದ ಹಾಸ್ಯ ಚಿತ್ರ ಎಂದು ಯೋಗಿ ಹೇಳಿಕೊಂಡಿದ್ದಾರೆ.  ಕೆ.ಕೃಷ್ಣರಾಜ್ ನಿರ್ದೇಶನದಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರದ ಟ್ರೇಲರ್ ಸಖತ್ ಹಿಟ್ ಆಗಿದ್ದು, ಹಾಡುಗಳು ಕೂಡ ಮೆಚ್ಚುಗೆ ಗಳಿಸಿದೆ. ಈ ಸಿನಿಮಾದಲ್ಲಿ  ಯೋಗಿ ಮೂರು ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಾಸ್ಯಮಿಶ್ರಿತ ಫ್ಯಾಮಿಲಿ ಎಂಟ್ರೈನಮೆಂಟ್ ಚಿತ್ರವಾಗಿ ಲಂಬೋದರ್ ತೆರೆಗೆ ಬರುತ್ತಿದೆ. ರಾಮಾ ರಾಮಾ ರೇ ಚಿತ್ರದ  ಹಾಸ್ಯ ನಟ ಧರ್ಮಣ್ಣ ಕಡೂರು  ಹಾಗೂ ನಾಯಕಿ ಸಂಗೀತಾ ಈ ಚಿತ್ರದಲ್ಲಿದ್ದಾರೆ. 

ಸ್ಯಾಂಡಲವುಡ್‍ನ ಹೆವಿ ಬಜೆಟ್ ಚಿತ್ರಗಳು ಹಾಗೂ ಸ್ಟಾರ್‍ನಟರ ಅಬ್ಬರದಿಂದ ಮಾಸ್ ಚಿತ್ರಗಳಲ್ಲಿಯೇ ಗುರುತಿಸಿಕೊಂಡ ನಟ ಯೋಗಿ ಬಹುತೇಕ ಕಳೆದುಹೋಗಿದ್ದಾರೆ.  ಹುಡುಗರು ಚಿತ್ರ ಯಶಸ್ವಿಯಾದ ಬಳಿಕ ಬಹುತೇಕ ಮರೆತು ಹೋಗಿದ್ದ ಯೋಗಿ ಸಿಂದ್ಲಿಂಗು ಚಿತ್ರದ ಮೂಲಕ ಕೊಂಚ ಚೇತರಿಸಿಕೊಂಡರು. ಆದರೆ ಕಳೆದ ಕೆಲ ವರ್ಷಗಳಿಂದ ಯಾವುದೆ ಹೇಳಿಕೊಳ್ಳುವಂತಹ ಚಿತ್ರಗಳು ಇಲ್ಲದ ಕಾರಣ ಚಿತ್ರರಂಗವೇ  ಲೂಸಮಾದ್‍ನನ್ನು ಮರೆತುಬಿಟ್ಟಿತ್ತು. ಇದೀಗ ಸಂಕ್ರಾಂತಿ ವೇಳೆ ಥಿಯೇಟರ್‍ಗೆ ಬರುತ್ತಿರುವ  ಲಂಬೋದರ್ ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡದೆ ಹೋದರೆ ಯೋಗಿ ಚಿತ್ರರಂಗದಲ್ಲಿ ತಮ್ಮ ನೆಲೆ ಕಳೆದುಕೊಳ್ಳುವುದು ಬಹುತೇಕ ಖಚಿತ.

ಹೀಗಾಗಿ ಸ್ಯಾಂಡಲವುಡ್‍ನಲ್ಲಿ ಸೀಸನ್ ಹೀರೋಗಳಂತೆ ಕಾಣಿಸಿಕೊಂಡು ಪ್ರಸಿದ್ಧಿಗೆ ಬಂದಿದ್ದ ಯೋಗಿಗೆ ಇದು ಉಳಿವಿನ ಪ್ರಶ್ನೆ. ಯೋಗಿ ನಟರಾಗಿ ತೆರೆಗೆ ಬಂದಿದ್ದರೂ ಎಲ್ಲ ನಾಯಕ ನಟರಂತೆ ವಿಭಿನ್ನ ಪಾತ್ರಗಳನ್ನು ನಿಭಾಯಿಸಿ ಮೋಡಿ ಮಾಡುವ ದೇಹದಾಡ್ರ್ಯವಾಗಲಿ, ಕಲರ್ ಆಗಲಿ ಅಥವಾ ಆರ್ಥಿಕ ಶಕ್ತಿಯಾಗಲಿ ಇಲ್ಲ. ಹೀಗಾಗಿ ಈಗಾಗಲೆ ತೆರೆಮರೆಗೆ ಸರಿದ ಕೆಲ ಹೀರೋಗಳಂತೆ ಯೋಗಿ ಕೂಡ ಸಂಕಷ್ಟದಲ್ಲಿದ್ದು,ಚಂದನವನದಲ್ಲಿ ಉಳಿಯಲೇ ಬೇಕೆಂದ್ರೆ ಈ ಸಿನಿಮಾ ಸಕ್ಸಸ್ ಕಾಣಬೇಕಿದೆ. ಅದರೆ ಪ್ರೇಕ್ಷಕ ಪ್ರಭುಗಳು ಯೋಗಿಭವಿಷ್ಯ ಹೇಗೆ ಬರಿತಾರೆ ಅನ್ನೋದು ಮಾತ್ರ ಕುತೂಹಲ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Actor Yogi #Cini Journy #Sandalwood #Lambodhar