ಚುನಾವಣೆಗೆ ಸರಿಯಾಗಿ ತೆರೆಗೆ ಬರ್ತಿದೆ ಮೋದಿ ಸಿನಿಮಾ 


05-01-2019 356

2019 ರ ಚುನಾವಣೆ ಮೋದಿಯವರಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿರುವಾಗಲೆ, ಮೋದಿಯವರ ಜೀವನ ಚಲನಚಿತ್ರವಾಗಿ ತೆರೆಯ ಮೇಲೆ ಬರಲಿದೆ. ಜನವರಿ  7 ರಂದು ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಲಿದ್ದು, ಜನವರಿ ಮಧ್ಯಭಾಗದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚುನಾವಣೆ ವೇಳೆಗೆ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಮೋದಿ ಅಭಿಮಾನಿಗಳಲ್ಲಿ ಚಿತ್ರ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ. 

ಭಾರತದ ಕುಸ್ತಿಪಟು ಮೇರಿಕೋಮ್ ಅವರ ಜೀವನವನ್ನು ಸುಂದರವಾಗಿ ತೆರೆಗೆ ತಂದ ನಿರ್ದೇಶಕ ಓಮಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, "ಪಿಎಂ ನರೇಂದ್ರ ಮೋದಿ"  ಹೆಸರಿನಲ್ಲಿ ಈ ಚಿತ್ರ ತೆರೆಗೆ ಬರಲಿದೆ.  ಚಿತ್ರವನ್ನು ಸಂದೀಪ ಸಿಂಗ್ ನಿರ್ಮಿಸುತ್ತಿದ್ದಾರೆ. ಚಿತ್ರದ ಪೋಸ್ಟರ್‍ನ್ನು  ಜನವರಿ 7 ರಂದು ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಬಿಡುಗಡೆಗೊಳಿಸಲಿದ್ದಾರೆ. ಚಿತ್ರ 23 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. 

ರಾಮಗೋಪಾಲವರ್ಮಾ ನಿರ್ದೇಶನದ ಕಂಪನಿ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿಯಾದ ವಿವೇಕ್ ಒಬೆರಾಯ್ ಇದೇ ಚಿತ್ರದ ನಟನೆಗಾಗಿ ಫಿಲ್ಮ್‍ಫೇರ್ ಅವಾರ್ಡ್ ಪಡೆದುಕೊಂಡಿದ್ದರು. ಇದೀಗ ವಿವೇಕ್ ಒಬೆರಾಯ್ ಪ್ರಧಾನಿ ಮೋದಿಯವರ ಪಾತ್ರ ನಿರ್ವಹಿಸಲಿದ್ದು, ಅದಕ್ಕಾಗಿ ಅವರ ಹಾವ-ಭಾವ ಹಾಗೂ ವೇಷಭೂಷಣಗಳ 
ಅನುಕರಣೆಯಲ್ಲಿ ತೊಡಗಿದ್ದಾರೆ. 

ಈಗಾಗಲೇ ದೇಶದಾದ್ಯಂತ ರಿಲೀಸ್ ಆಗಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಕತೆಯನ್ನು ಒಳಗೊಂಡ "ದ ಆಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್" ಚಿತ್ರ ಸಾಕಷ್ಟು ಸಂಚಲನ ಉಂಟು ಮಾಡಿದ್ದು, ಕಾಂಗ್ರೆಸ್ ನಾಯಕರು  ಹಾಗೂ ಕಾರ್ಯಕರ್ತರ ವಿರೋಧಕ್ಕೆ ತುತ್ತಾಗಿದೆ. ಹೀಗಿರುವಾಗಲೇ ಈಗ ಮೋದಿಯವರ ಜೀವನಚರಿತ್ರೆ ಚಿತ್ರವಾಗಲಿದ್ದು, ಈ ಚಿತ್ರವೂ ದೇಶದಲ್ಲಿ ಸಾಕಷ್ಟು ಚರ್ಚೆ ಹಾಗೂ ವಿವಾದಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಇನ್ನು ಈ ಚಿತ್ರದಲ್ಲಿ ಮೋದಿಯವರ ಬದುಕಿನ ವಿವಾದಿತ ಸಂಗತಿಯಾಗಿರುವ ಮದುವೆ ಹಾಗೂ ಪತ್ನಿಯ ಉಲ್ಲೇಖವಿರಲಿದೆಯೇ? ಜಶೋಧಾ ಬೆನ್ ಹಾಗೂ ಮೋದಿಯವರ ಸಂಬಂಧದ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಈ ಚಿತ್ರದಲ್ಲಿ ದೊರೆಯಲಿದೆಯೇ ಅನ್ನೋದು ಎಲ್ಲರ  ಕುತೂಹಕ್ಕೆ ಕಾರಣವಾಗಿದೆ. 

ಚಿತ್ರ ಬಹುಷಃ ಲೋಕಸಭಾ ಚುನಾವಣೆಗೂ ಮುನ್ನ ರಿಲೀಸ್ ಆಗಲಿದ್ದು,   ಚುನಾವಣೆ ವೇಳೆ ಮತದಾರರ ಮೇಲೆ ನೇರ ಪ್ರಭಾವ ಬೀರುವ ಉದ್ದೇಶದಿಂದಲೇ ಚಿತ್ರ ನಿರ್ಮಿಸಲಾಗ್ತಿದೆ ಅನ್ನೋ ಮಾತು ಕೂಡ ಕೇಳಿಬಂದಿದೆ. ಮೋದಿಯವರನ್ನು ರಾಷ್ಟ್ರಕ್ಕೆ ಸಮರ್ಪಿತ ವ್ಯಕ್ತಿಯಾಗಿಯೇ ಚಿತ್ರಿಸಲಾಗೋದರಿಂದ ಈ ಚಿತ್ರ ಮತದಾರರ ಮೇಲೆ ಪ್ರಭಾವ ಬೀರಲಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಚಿತ್ರಕ್ಕೆ ಹೇಗೆ ಪ್ರತಿಕ್ರಿಯಿಸಲಿವೆ ಅನ್ನೋದು ಮಹತ್ವದ ಸಂಗತಿಯಾಗಿದೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

# Narendra Modi # Vivek Oberoi # Biopic #Election