ಹೋದೆಯಾ ಅನಂತೂ ಅಂದ್ರೆ.....


04-01-2019 496

ಬಿಜೆಪಿಯ ಆ ನಾಯಕ ಬಾಯಿ ಬಿಟ್ಟರೆ ಸಾಕು ವಿವಾದವೊಂದು ಹುಟ್ಟಿಕೊಂಡಿತು ಎಂದೇ ಅರ್ಥ. ಡೋಂಟ್ ಕೇರ್ ವರ್ತನೆಯಿಂದಲೇ ದೇಶದ ಗಮನ ಸೆಳೆದ ರಾಜಕಾರಣಿ ಮತ್ಯಾರೂ ಅಲ್ಲ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ. ಹೌದು ಅನಂತಕುಮಾರ್ ಹೆಗಡೆ ಮಾತನಾಡಿದ್ರೆ ಅಲ್ಲೊಂದು ವಿವಾದವಿರುತ್ತದೆ. ನಿರ್ದಾಕ್ಷಿಣ್ಯವಾದ ಟೀಕೆಯಿರುತ್ತದೆ. ಮುಕ್ತವಾದ ಮಾತಿರುತ್ತದೆ. ಇಂತಿಪ್ಪ ಅನಂತಕುಮಾರ್ ಹೆಗಡೆ ಅದ್ಯಾಕೋ ಇತ್ತೀಚಿನ ದಿನಗಳಲ್ಲಿ ಮಾತು ಕಡಿಮೆ ಮಾಡಿದ್ದಾರೆ. ಮಾತಲ್ಲ ತಮ್ಮ ಬಾಯಿಯಿಂದ ಬಾಂಬ್‍ಗಳನ್ನು ಸಿಡಿಸುವುದನ್ನು ನಿಲ್ಲಿಸಿದ್ದಾರೆ. 

ಅನಂತಕುಮಾರ್ ಹೆಗಡೆ ಹಲವು ವರ್ಷಗಳಿಂದ ಸತತವಾಗಿ  ಉತ್ತರಕನ್ನಡ ಜಿಲ್ಲೆಯ ಸಂಸದರಾಗಿ ಆಯ್ಕೆಯಾಗುತ್ತಿರುವ ಬಿಜೆಪಿ ನಾಯಕ. ಪ್ರತಿಬಾರಿ ಚುನಾವಣೆ ಮುನ್ನ ಮತ್ತು ಚುನಾವಣೆ ನಂತರ ಅನಂತಕುಮಾರ್ ತಮ್ಮ ಹೇಳಿಕೆಗಳಿಂದಲೇ ಚರ್ಚೆಗೀಡಾಗುತ್ತಿದ್ದರು. ಚುನಾವಣೆ ವೇಳೆ  ನನಗೆ ಮುಸ್ಲಿಂರು ಮತಹಾಕಬೇಡಿ ಎಂದು ಬಹಿರಂಗವಾಗಿ ಹೇಳಿದ್ದ ಅನಂತಕುಮಾರ್ ಹೆಗಡೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ನುಡಿದಂತೆ ನಡೆದ ಅನಂತಕುಮಾರ್, ಯಾವುದೇ ಕಾರಣಕ್ಕೂ  ಕ್ಷಮೆಯಾಚಿಸುವುದಿಲ್ಲ ಎಂದರಲ್ಲದೆ  ಕ್ಷಮೆಯಾಚಿಸದೆ ತಮ್ಮ ನಡೆಯನ್ನೇ ಸಮರ್ಥಿಸಿಕೊಂಡು ಬಂದರು. 

ಅನಂತಕುಮಾರ್ ಹೆಗಡೆ ಕರ್ನಾಟಕದ ಮುಖ್ಯಮಂತ್ರಿ  ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರೋದರಿಂದ ಹೆಗಡೆ ಮಾತುಗಳು ಮತ್ತಷ್ಟು ಮಹತ್ವ ಪಡೆದುಕೊಂಡವು. ತನ್ನ ಅನಾರೋಗ್ಯ ಪೀಡಿತ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲವೆಂಬ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಸಂಸದ ಅನಂತಕುಮಾರ್ ಮೇಲೆ ಪ್ರಕರಣ ಕೂಡ ದಾಖಲಾಯಿತು. ಅಷ್ಟೇ ಅಲ್ಲ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿದ ಅನಂತಕುಮಾರ್  ಇದೇ ಕಾರಣಕ್ಕೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಯನ್ನು  ಎದುರಿಸಿದರು. ಆದರೂ ಅವರ ಸ್ವಭಾವ ಬದಲಾಗಿರಲಿಲ್ಲ. 

ಆದರೆ ಸಂವಿಧಾನ ಬದಲಾವಣೆಯ ಹೇಳಿಕೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಮುಖ್ಯಸ್ಥರು  ಇನ್ಮುಂದೆ ಈ ರೀತಿ ಪ್ರಚೋದನಾತ್ಮಕ ಹೇಳಿಕೆ ಕೊಡದಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಮಾತಿಗೆ ಮನ್ನಣೆ ನೀಡಿರುವ 
ಅನಂತಕುಮಾರ್ ಹೆಗಡೆ ಎಲ್ಲ ವಿವಾದಾತ್ಮಕ ಭಾಷಣಗಳಿಂದ ದೂರವಿದ್ದಾರೆ. 2019 ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಹಿರಿಯರು ಅನಂತಕುಮಾರ್ ಹೆಗಡೆ ಬಾಯಿಗೆ ಬೀಗ ಹಾಕಿಸಿದ್ದಾರೆ ಎನ್ನಲಾಗುತ್ತಿದೆ. 

ಕೆಲವರು ಅನಂತಕುಮಾರ್ ಹೆಗಡೆಯನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಬೇಕೆಂದೂ ಒತ್ತಾಯಿಸಿದ್ದರು. ಆದರೆ ಇದ್ಯಾವುದರಿಂದ ಅನಂತಕುಮಾರ್ ಹೆಗಡೆಯವರ ರಾಜಕೀಯ ಭವಿಷ್ಯದ ಮೇಲೆ ಯಾವುದೇ ಪರಿಣಾಮವಾಗಲಿಲ್ಲ. ಅನಂತಕುಮಾರ್ ಬಿಜೆಪಿಗಿಂತಲೂ ಮೊದಲು ಆರ್‍ಎಸ್‍ಎಸ್‍ನ ಮೂಲ ಕಾರ್ಯಕರ್ತರಾಗಿದ್ದು, ವಿವಾದಿತ ಈದ್ಗಾ ಮೈದಾನದಲ್ಲಿ ಭಾರತದ ಧ್ವಜ ಹಾರಿಸಿ ಪೊಲೀಸರ ಕೆಂಗಣ್ಣಿಗೆ ತುತ್ತಾಗಿದ್ದರು. ಆರ್.ಎಸ್.ಎಸ್. ಮೂಲದಿಂದ ಬಂದಿರುವ ಕಾರಣಕ್ಕೆ  ಅನಂತಕುಮಾರ ಅರಳು ಸಿಡಿದಂತೆ ನೇರವಾಗಿ ಮಾತನಾಡುವ ಕಲೆ ರೂಢಿಸಿಕೊಂಡಿದ್ದಾರೆ ಅಂತಾರೆ ಅವರ ಆಪ್ತರು. 

ಇನ್ನು ಪಕ್ಷದಿಂದ ಖಡಕ್ ವಾರ್ನಿಂಗ್ ಪಡೆದಿರುವ ಅನಂತಕುಮಾರ್, ಪೂರ್ಣ ಮೌನವಾಗಿದ್ದಾರೆ ಅಂದ್ರೆ,  ಮಾತೇ ಆಡ್ತಿಲ್ಲ ಎಂದರ್ಥವಲ್ಲ. ಕೇರಳದ ಉದ್ವಿಘ್ನ ಸ್ಥಿತಿ ಹಾಗೂ ಶಬರಿಮಲೈ ಪ್ರವೇಶದ  ಕುರಿತು ಟೀಕಿಸಿರುವ ಅನಂತಕುಮಾರ್ ಹೆಗಡೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಹಂಕಾರದಿಂದಲೇ ಇಷ್ಟೊಂದು ಗೊಂದಲ ಉಂಟಾಗಿದೆ. ಸರ್ಕಾರ ಬೇಕೆಂದೇ ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಿದೆ. ಸುಪ್ರಿಂ ಕೋರ್ಟ್‍ನ ಆದೇಶವನ್ನು ಸಮರ್ಪಕವಾಗಿ ಯಾರಿಗೂ ಧಕ್ಕೆಯಾಗದಂತೆ ಜಾರಿಗೆ ತರುವ ಬದಲು ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇನ್ನೇನು ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣೆ ವೇಳೆಗೆ ಅನಂತಕುಮಾರ್ ಬಾಯಿಂದ ಇನ್ನೆಷ್ಟು ಅಣಿಮುತ್ತುಗಳು ಉದುರುತ್ತೋ ಕಾದು ನೋಡಬೇಕಿದೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Ananthakumara Hegde # Not Silent #Fire Brand #Karnataka