ದೋಸ್ತಿ ಪಕ್ಷಗಳ ನಡುವೆ ಜಟಾಪಟಿ


10-12-2018 305

ಬೆಳಗಾವಿ.ಡಿ.10 ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ದೋಸ್ತಿ ಪಕ್ಷಗಳ ನಡುವೆ ಜಟಾಪಟಿ ಮುಂದುವರೆದಿದೆ. ಕಾಂಗ್ರೆಸ್ ಜತೆಗೆ ಜೆಡಿಎಸ್ ಸಹ ದೆಹಲಿ ಸೂಚನೆಗಾಗಿ ಕಾಯುತ್ತಿದೆ.

ಸಭಾಪತಿ ಸ್ಥಾನಕ್ಕೆ ಮಂಗಳವಾರ ನಾಮಪತ್ರ ಸಲ್ಲಿಸಬೇಕಾಗಿದೆ.ಆದರೆ ಸಭಾಪತಿ ಸ್ಥಾನ ಯಾವ ಪಕ್ಷಕ್ಕೆ ಎಂಬ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ.

ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನೇ ಮುಂದುವರೆಸಲು ಜೆಡಿಎಸ್ ಆಸಕ್ತವಾಗಿದ್ದರೆ, ಪರಿಷತ್‍ನಲ್ಲಿ ಹೆಚ್ಚಿನ ಸ್ಥಾನಗಳನ್ನು ಹೊಂದಿರುವ ತಮಗೆ ಆ ಸ್ಥಾನ ಸಿಗಬೇಕೆಂದು ಕಾಂಗ್ರೆಸ್ ಅಪೇಕ್ಷೆ ಪಡುತ್ತಿದೆ. ಕಾಂಗ್ರೆಸ್ ಎಸ್.ಆರ್. ಪಾಟೀಲ್ ಅವರನ್ನು ಸಭಾಪತಿ ಮಾಡುವ ಉದ್ದೇಶವನ್ನು ಹೊಂದಿದೆ.

ರಾಹುಲ್ ಭೇಟಿ ಮಾಡಲಿರುವ ಗೌಡರು:

ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ದೆಹಲಿಯಲ್ಲಿ ಚರ್ಚೆ ನಡೆಸಲಿದ್ದಾರೆ. ಆ ನಂತರ ಆ ಹುದ್ದೆ ಯಾರಿಗೆ ಎಂಬುದು ನಿರ್ಧಾರವಾಗಲಿದೆ.

ದೇವೇಗೌಡರು ಮಹಾಘಟಬಂಧನ್‍ಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ದೆಹಲಿಯಲ್ಲಿದ್ದಾರೆ. ಅವರು ರಾಹುಲ್ ಅವರ ಸಮಯ ಸಿಕ್ಕ ಕೂಡಲೇ ಚರ್ಚೆ ನಡೆಸಲಿದ್ದಾರೆ.

ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಲ್ಲಿ ಮುಂದುವರೆಸಿದರೆ ಮಂತ್ರಿ ಸ್ಥಾನಕ್ಕೆ ಅವರ ಬೇಡಿಕೆ ಇರುವುದಿಲ್ಲವೆಂಬುದು ಜೆಡಿಎಸ್ ನಾಯಕರ ಉದ್ದೇಶ. ಅದೇ ಕಾರಣಕ್ಕಾಗಿಯೇ ಸಭಾಪತಿ ಸ್ಥಾನ ತಮಗೆ ಬೇಕೆಂದು ಪಟ್ಟು ಹಿಡಿದಿದೆ.ಆದರೆ ಪರಿಷತ್‍ನಲ್ಲಿ ಹೆಚ್ಚಿನ ಸ್ಥಾನ ಹೊಂದಿರುವುದರಿಂದ ಆ ಹುದ್ದೆ ಪಡೆಯಬೇಕು ಎಂಬುದು ಕಾಂಗ್ರೆಸ್‍ನ ಉದ್ದೇಶವಾಗಿದೆ.

ಒಂದು ವೇಳೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್‍ಗೆ ಸಭಾಪತಿ ಸ್ಥಾನ ಬಿಟ್ಟುಕೊಡುವಂತೆ ಒತ್ತಾಯ ಮಾಡಿದರೆ ಅದಕ್ಕೂ ಮಣಿಯಲು ದೇವೇಗೌಡರು ಸಿದ್ಧರಿದ್ದಾರೆ ಎಂದು ಜೆಡಿಎಸ್‍ನ ಮೂಲಗಳು ಖಚಿತಪಡಿಸಿವೆ.

ಮಂಗಳವಾರ ಬೆಳಗ್ಗೆ ವೇಳೆಗೆ ಯಾವ ಪಕ್ಷಕ್ಕೆ ಎಂಬುದು ಅಂತಿಮವಾಗಲಿದೆ. ಆದ್ದರಿಂದಲೇ ಕಾಂಗ್ರೆಸ್ ಮುಖಂಡರು ಹೈಕಮಾಂಡ್‍ನಿಂದ ಬರುವ ಸೂಚನೆಗೆ ಕಾಯುತ್ತಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ದೋಸ್ತಿ ಕಾಂಗ್ರೆಸ್ Belgaum JDS