ಮಾದಿಗ ದಂಡೋರ ಸಂಘಟನೆಯ ತಮಟೆ ಚಳವಳಿ


24-09-2018 276

ಬೆಂಗಳೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಸಂಘಟನೆಯ ನೂರಾರು ಕಾರ್ಯಕರ್ತರು ನಗರದಲ್ಲಿ ತಮಟೆ ಚಳವಳಿ ನಡೆಸಿದರು..

ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಮಾದಿಗ ದಂಡೋರ ನೇತೃತ್ವದಲ್ಲಿ ಸೇರಿದ ಹೋರಾಟಗಾರರು, ಸಮ್ಮಿಶ್ರ ಸರ್ಕಾರ ಸದಾಶಿವ ವರದಿಯನ್ನು ಸಚಿವ ಸಂಪುಟ ಒಪ್ಪಿಗೆ ಪಡೆದು, ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಂಡೋರ ಅಧ್ಯಕ್ಷ ಎಂ.ಶಂಕರಪ್ಪ, ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ತಳಸಮುದಾಯದ ವರ್ಗದವರಿಗೆ ಸಮಾನ ಅವಕಾಶ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಅನುಚ್ಛೇದ 14, 15, 16/1ರ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಮೂಲಕ ಅನುಷ್ಠಾನಗೊಳಿಸಿದ್ದಾರೆ.

ಆದರೆ ಮೀಸಲಾತಿ ನೀತಿಯಿಂದ ಶಿಕ್ಷ ಣ, ಸರ್ಕಾರಿ ಉದ್ಯೋಗ ಪಡೆಯುವ ಮೂಲಕ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು. ಆದರೆ ಕಳೆದ 70 ವರ್ಷಗಳಿಂದ ಸರ್ಕಾರಗಳು ಪೂರ್ಣ ಪ್ರಮಾಣದ ಮೀಸಲಾತಿಯನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿವೆ ಎಂದು ದೂರಿದರು.

ಈ ಹಿಂದಿನ ಸರಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಅಧ್ಯಕ್ಷ ತೆಯಲ್ಲಿ ಸಮಿತಿ ರಚನೆ ಮಾಡಿತು. ಸತತವಾಗಿ 8 ತಿಂಗಳ ಕಾಲ ಸುದೀರ್ಘವಾಗಿ ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಯಿತು. ಆದರೆ, ರಾಜ್ಯ ಸರ್ಕಾರ 6 ವರ್ಷಗಳಿಂದ ವರದಿಯನ್ನು ಅಂಗೀಕರಿಸದೆ ನಿರ್ಲಕ್ಷಿಸುತ್ತಿದ್ದು, ತಳ ಸಮುದಾಯಗಳಲ್ಲಿ ಅಪನಂಬಿಕೆ ಮೂಡಿ, ಮುಖ್ಯವಾಹಿನಿಗೆ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲು ಸರ್ಕಾರವೇ ಕಾರಣವಾಗಿದೆ ಎಂದು ಆರೋಪಿಸಿದರು.

ಸದಾಶಿವ ವರದಿಗೆ ಅನುಮೋದನೆ ನೀಡಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಹಿಂದುಳಿದ ವರ್ಷಗಳ ಆಯೋಗದ ಅಧ್ಯಕ್ಷ ಕಾಂತರಾಜು ಅವರ ವರದಿಯನ್ನು ಕೂಡಲೇ ಸಾರ್ವಜನಿಕವಾಗಿ ಘೋಷಣೆ ಮಾಡಿ, ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಅರ್ಪಿಸಬೇಕು ಎಂದು ಹೇಳಿದರು. ಅದೇ ರೀತಿ, ಆದಿ ಜಾಂಭವ ನಿಗಮ ಲೋಕಾರ್ಪಣೆ ಮಾಡಬೇಕು. ಜೊತೆಗೆ ಮಾದಿಗ ಸಮುದಾಯದ ಮೂರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

A.J.Sadashiva Reservation ಸಮುದಾಯ ಮೀಸಲಾತಿ