ಬಿಜೆಪಿಗೆ ಸವಾಲೆಸೆದ ಸಿದ್ದರಾಮಯ್ಯ!


20-09-2018 360

ನವದೆಹಲಿ: ಬಿಜೆಪಿ ನಾಯಕರು ಸೋತ ನಂತರ ಮರ್ಯಾದೆಯಿಂದ ವಿರೋಧಪಕ್ಷವಾಗಿ ಕೆಲಸ ಮಾಡುವ ಬದಲು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯ ಕೆಲವು ನಾಯಕರು ಲಜ್ಜೆಗೆಟ್ಟವರು. ಸುಮ್ಮನೆ ಸಿದ್ಧಾಂತದ ಮಾತನಾಡುತ್ತಾರೆ. ಅಂಥವರಿಗೆ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ದೆಹಲಿಯಿಂದಲೇ ಕಾಂಗ್ರೆಸ್ ಶಾಸಕರ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಕೆಲವು ಶಾಸಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹರಿಹರ ಶಾಸಕ ರಾಮಪ್ಪ, ಸಚಿವ ರಮೇಶ್ ಜಾರಕಿಹೊಳಿಗೂ ಕರೆ ಮಾಡಿದ ಸಿದ್ದರಾಮಯ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ಬಿಜೆಪಿ ನಾಯಕರ ಆಮಿಷಕ್ಕೆ ಬಲಿಯಾಗದಿರಲು ಸೂಚನೆ ನೀಡಿರುವ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಪ್ರತಿಕ್ರಿಯೆ ನೀಡದಿರಲು ಹೇಳಿದ್ದಾರೆ.

ಕೇಂದ್ರ ಸರ್ಕಾರ ನಮ್ಮದು ಎಂಬ ಯಡಿಯೂರಪ್ಪನವರ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ‘ಕಾಂಗ್ರೆಸ್ ನ ಯಾವೊಬ್ಬ ಶಾಸಕನೂ ಬಿಜೆಪಿಗೆ ಹೋಗುವುದಿಲ್ಲ. ಏನು ಮಾಡ್ತಾರೋ ನೋಡೋಣ’ ಎಂದು ಬಿಜೆಪಿಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Siddaramaiah Phone call ಕೇಂದ್ರ ಸರ್ಕಾರ ಸಂಪರ್ಕ