ಮಾನಭಂಗದ ನಾಟಕ: ಸುಲಿಗೆಕೋರ ಮಹಿಳೆಯರಿಬ್ಬರ ಬಂಧನ


14-09-2018 365

ಬೆಂಗಳೂರು: ಕಣ್ಸನ್ನೆ ಮಾಡಿ ಪುರುಷರನ್ನು ಅಕರ್ಷಿಸಿ ಆಟೋದಲ್ಲಿ ಕರೆದೊಯ್ದು ಮಾನಭಂಗ ಮಾಡಿರುವುದಾಗಿ ರಕ್ಷಣೆಗೆ ಜನರನ್ನು ಕರೆಸಿ ಧರ್ಮದೇಟು ಕೊಡಿಸಿ ಪೊಲೀಸರಿಗೆ ಹಿಡಿದು ಕೊಡುವುದಾಗಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‍ನ ಇಬ್ಬರು ಐನಾತಿ ಮಹಿಳೆಯರನ್ನು  ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿಯ ಸಾರಕ್ಕಿ ಗೇಟ್‍ನ ಆಶಾ (28), ದಾಸರಹಳ್ಳಿಯ ಬೈಲಪ್ಪ ಸರ್ಕಲ್‍ನ ಸುಧ ಅಲಿಯಾಸ್ ರೇಖಾ (28) ಬಂಧಿತ ಆರೋಪಿಗಳಾಗಿದ್ದು, ಇವರ ಗ್ಯಾಂಗ್‍ನಲ್ಲಿದ್ದ ರತ್ನ, ಸುಮ, ಪದ್ಮ ಹಾಗೂ ಆಟೋ ಚಾಲಕ ರಾಜೇಶ್ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ

ಬಂಧಿತ ಆಶಾ ಹಾಗೂ ರೇಖಾ ತಲೆಮರೆಸಿಕೊಂಡಿರುವ ಗ್ಯಾಂಗ್‍ನ ರತ್ನ, ಸುಮ, ಪದ್ಮ ಜೊತೆ ಸೇರಿ ಮೆಜೆಸ್ಟಿಕ್ ಸುತ್ತಮುತ್ತ ಪ್ರದೇಶಗಳಲ್ಲಿ ತಿರುಗಾಡುತ್ತಾ, ಪುರುಷರನ್ನು ಕಣ್ಸನ್ನೆ ಮಾಡಿ ಹತ್ತಿರ ಕರೆದು ವ್ಯವಹಾರ ಕುದುರಿಸಿ ರಾಜೇಶ್‍ ಎಂಬಾತನಿಂದ ಆಟೋ ತರಿಸಿಕೊಂಡು ಅದರಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು.

ವರಸೆ ಬದಲು: ಸ್ವಲ್ಪ ದೂರ ಹೋದ ನಂತರ ವರಸೆ ಬದಲಿಸಿ ನಮ್ಮನ್ನು ಆಟೋದಲ್ಲಿಯೇ ಹಿಡಿದು ಲೈಂಗಿಕ ಕಿರುಕುಳ ನೀಡಿ ಮಾನ ಭಂಗ ಮಾಡಿದ್ದಾರೆ ಎಂದು ರಕ್ಷಣೆಗೆ ಜನರನ್ನು ಕರೆದು ಧರ್ಮದೇಟು ಕೊಡಿಸಿ ಪೊಲೀಸರಿಗೆ ಹಿಡಿದು ಕೊಡುತ್ತೆವೆ ಎಂದು ಹೆದರಿಸಿ ನಗದು, ಚಿನ್ನಾಭರಣ ಕೇಳುತ್ತಿದ್ದರು.

ಪ್ರತಿರೋಧ ತೋರಿದರೆ, ಮಾನ ತೆಗೆಯುವುದಾಗಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಕಳೆದ ಸೆ. 11 ರಂದು ಮೆಜೆಸ್ಟಿಕ್‍ನಲ್ಲಿ ಉಡುಪಿ ಮೂಲದ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ಸೆಳೆದು, ಆಟೋದಲ್ಲಿ ಕರೆದುಕೊಂಡು ಹೋಗಿ ಮಾನಭಂಗದ ಬೆದರಿಕೆ ಹಾಕಿ ಮೂರು ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಉಪ್ಪಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಕುಮಾರ್, ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸಿ, ಉಳಿದವರ ಬಂಧನಕ್ಕೆ ಶೋಧ ನಡೆಸಿದ್ದಾರೆ. ಬಂಧಿತ ಮಹಿಳೆಯರು ಇನ್ನೂ ಕೆಲವು ಕಡೆ ಇಂತಹದ್ದೇ ಕೃತ್ಯದಲ್ಲಿ ತೊಡಗಿರುವ ಮಾಹಿತಿ ಇದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Robbery gang women ಪ್ರತಿರೋಧ ಮಾನ ಭಂಗ