ಉಡುಪಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು


03-09-2018 223

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಡೆದ ನಾಲ್ಕು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಉಡುಪಿ ನಗರಸಭೆ, ಕಾರ್ಕಳ ಮತ್ತು ಕುಂದಾಪುರ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಗಳಲ್ಲೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಉಡುಪಿ ನಗರಸಭೆಯ 35 ವಾರ್ಡ್ ಗಳ ಪೈಕಿ ಮೂವತ್ತೊಂದು ವಾರ್ಡ್ ಗಳನ್ನು ಬಾಚಿಕೊಳ್ಳುವ ಮೂಲಕ ಕಾಂಗ್ರೆಸ್ ಕೈಯಿಂದ ನಗರಸಭೆಯನ್ನು ಕಸಿದುಕೊಂಡಿದೆ. ಈ ಭಾಗದ ಪ್ರಭಾವೀ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಇದು ದೊಡ್ಡ ಮುಖಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಅದೇ ಫಲಿತಾಂಶವನ್ನು ಪುನರಾವರ್ತನೆ ಮಾಡಿದೆ. ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್ ಈ ಹಿಂದೆಲ್ಲಾ ಕಾಂಗ್ರೆಸ್ ನವರು ಗಾಳಿಯಿಂದಾಗಿ ಬಿಜೆಪಿ ಗೆದ್ದಿದೆ ಅನ್ನುತ್ತಿದ್ದರು. ಆದರೆ ಯಾವ ಗಾಳಿಯೂ ಇಲ್ಲ ಎಂಬುದು ಸ್ಥಳೀಯ ಸಂಸ್ಥೆ ಫಲಿತಾಂಶದಿಂದ ಸಾಬೀತಾಗಿದೆ. ಉಡುಪಿ ನಗರಸಭೆ ಗೆಲುವು ಐತಿಹಾಸಿಕ ಕಾರಣಕ್ಕೂ ಸ್ಮರಿಸುವಂತಹ ಗೆಲುವು, ಐವತ್ತು ವರ್ಷ ಹಿಂದೆ ಇಡೀ ದೇಶದಲ್ಲೇ ಮೊದಲ ಬಾರಿಗೆ ಜನಸಂಘ ಉಡುಪಿ ನಗರಸಭೆಯನ್ನು ಗೆದ್ದುಕೊಂಡಿತ್ತು. ಈಗ ಬಿಜೆಪಿಗೆ ಭಾರೀ ಬಹುಮತ ಬಂದಿದೆ ಇದು ಎಲ್ಲ ಬಿಜೆಪಿ ಕಾರ್ಯಕರ್ತರ ಗೆಲುವು. ಬಿಜೆಪಿಯನ್ನು ಮೆಚ್ಚಿ ಜನ ಮತ ಹಾಕಿದ್ದಾರೆ. ಇದು ಅಭಿವೃದ್ಧಿಗಾಗಿ ಸಂದ ಗೆಲುವು ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ