ಮೋದಿ ಸಂವಿಧಾನವನ್ನೂ ಮೀರಿ ವರ್ತಿಸುತ್ತಿದ್ದಾರೆ: ಜೈಪಾಲ್ ರೆಡ್ಡಿ


30-08-2018 293

ಬೆಂಗಳೂರು: ರಫೇಲ್ ಡೀಲ್ ಮೂಲಕ ಕೇಂದ್ರದ ಎನ್‍ಡಿಎ ಸರ್ಕಾರ 41 ಸಾವಿರ ಕೋಟಿ ರೂ. ನಷ್ಟ ಉಂಟುಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಂತ ಅನನುಭವಿ ಸಂಸದೆಯನ್ನು ಕೇಂದ್ರದ ಪ್ರಮುಖ ರಕ್ಷಣಾ ಖಾತೆ ನೀಡಲಾಗಿದೆ. ಮಾತಿನಲ್ಲಿ ಕೂಡ ಗಂಭೀರತೆ ಇಲ್ಲ. ಕರ್ನಾಟಕದಿಂದ ಆಯ್ಕೆ ಯಾಗಿರುವ ನಿರ್ಮಲಾ ಸೀತಾರಾಮನ್ ಯುಪಿಎ ಅವಧಿಗಿಂತ ಶೇ.9 ಪ್ರತಿಶತ ಕಡಿಮೆ ಬೆಲೆಗೆ ನಾವು ವಿಮಾನ ಕೊಂಡಿದ್ದೇವೆ ಎಂದಿದ್ದಾರೆ. ಬೆಲೆ ಹೇಳಿ ಅಂದರೆ ತಿಳಿಸುತ್ತಿಲ್ಲ. ಹಿಂಜರಿಕೆ ಏಕೆ. ಬೆಲೆ ತಿಳಿಸದೇ ವಂಚಿಸುತ್ತಿದ್ದಾರೆ. ಸಚಿವೆ ಉತ್ತರಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾತನಾಡುತ್ತಿಲ್ಲ. ಯಾಕೆ ಭಾರತೀಯ ನಾಗರಿಕರಿಗೆ ತಿಳಿಸುತ್ತಿಲ್ಲ. ಕೂಡಲೇ ಸಂಪೂರ್ಣ ಮೊತ್ತ ತಿಳಿಸಬೇಕು. ಇದರಲ್ಲಿ ಅಂಬಾನಿಯ ಕಂಪನಿ ಪಾತ್ರ ತಿಳಿಸಬೇಕು. ಅನಿಲ್ ಅಂಬಾನಿ, ಮೋದಿ-ಫ್ರೆಂಚ್ ಕಂಪನಿ ನಡುವೆ ಮಧ್ಯವರ್ತಿ ಆಗಿದ್ದಾರೆ. ಇವರಿಗೆ ಎಷ್ಟು ಕಮಿಷನ್ ಸಿಕ್ಕಿದೆ ಎಂದು ತಿಳಿಸಬೇಕೆಂದರು.

2015ರ ಏಪ್ರಿಲ್ 10ಕ್ಕೆ ಡೀಲ್ ತಡೆಯಾದಾಗ ಸಮಾನ ಮೊತ್ತಕ್ಕೆ ಕೊಂಡುಕೊಳ್ಳುತ್ತೇವೆ ಎಂದಿದ್ದರು. ಇದೀಗ ಬೆಲೆ ತಿಳಿಸುತ್ತಿಲ್ಲ. ಮೋದಿ ಸಂವಿಧಾನವನ್ನೂ ಮೀರಿ ವರ್ತಿಸುತ್ತಿದ್ದಾರೆ. ತಡೆಯುವವರೇ ಇಲ್ಲ. ಮಾಹಿತಿ ಕೇಳಿದ ನಮ್ಮ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಲೆಕ್ಕ ಕೊಟ್ಟಿಲ್ಲ. ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದಾರೆ. ಅವರಾದರೂ ಉತ್ತರಿಸಲಿ. ಕೇಂದ್ರ ಸರ್ಕಾರ ನಮ್ಮ ಪ್ರಶ್ನೆಗೆ ಉತ್ತರ ನೀಡದೇ ಕೌಂಟರ್ ಪ್ರಶ್ನೆ ಹಾಕುತ್ತಿದೆ. ಫ್ರೆಂಚ್ ಕಂಪನಿ ಫ್ರೆಂಚ್ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ. ರಿಲಯನ್ಸ್ ಮಾಹಿತಿ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಮೊದಲು ಯುಪಿಎ ಬೆಲೆ ಎಷ್ಟಿತ್ತು? ಈಗಿನ ಸರ್ಕಾರ ನಿಗದಿಪಡಿಸಿದ ಬೆಲೆ ಎಷ್ಟು ಎಂದು ತಿಳಿಸಬೇಕೆಂದು ಆಗ್ರಹಿಸಿದರು.

ಎಚ್‍ಎಎಲ್ ದೇಶದ, ಬೆಂಗಳೂರಿನ ಹೆಮ್ಮೆ. ಕಳೆದ 30 ವರ್ಷದಿಂದ ಇದ್ದು, 30 ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಇವರಲ್ಲಿ 10 ಸಾವಿರ ಮಂದಿ ಉದ್ಯೋಗ ವಿಲ್ಲದಂತಾಗಿದ್ದಾರೆ. ಯುಪಿಎ ಅಧಿಕಾರದಲ್ಲಿದ್ದಾಗ ಸಾಕಷ್ಟು ಅನುಕೂಲ ಮಾಡಿಕೊಡಲಾಗಿತ್ತು. ಈಗ ಫ್ರೆಂಚ್ ಕಂಪನಿಗೆ ನೀಡಲಾಯಿತು. ಅನಿಲ್ ಅಂಬಾನಿ ಈ ಡೀಲ್ ಗೆ 12 ದಿನ ಮುನ್ನ ಖರೀದಿಸಿದರು. ಎಚ್‍ಎಎಲ್ ಸಿಗಬೇಕಿದ್ದ ಕಾರ್ಯ ತಡೆದರು. ತ್ವರಿತಗತಿಯಲ್ಲಿ ಈ ಡೀಲ್ ನಡೆಯಿತು.

126 ವಿಮಾನದಲ್ಲಿ 36  ವಿಮಾನ ಮಾತ್ರ ಸಿಕ್ಕಿದೆ. ದೇಶದ ಸುರಕ್ಷತೆಗೆ ಗ್ಯಾರೆಂಟಿ ಏನು. ಎಚ್‍ಎಎಲ್ ನಿರ್ಲಕ್ಯಕ್ಕೆ ಒಳಗಾಗಿ ನರಕಕ್ಕೆ ತಳ್ಳಲ್ಪಟ್ಟರೆ, ಅನಿಲ್ ಅಂಬಾನಿಗೆ ಸ್ವರ್ಗ ಸಿಕ್ಕಿತು. ಎಚ್‍ಎಎಲ್ ಅನ್ನು ಅಂಬಾನಿ ನರಕಕ್ಕೆ ತಳ್ಳಿದರು. ನಮ್ಮಲ್ಲಿ ಸಾಮರ್ಥ್ಯ ಇರಲಿಲ್ಲವೇ. ಅದನ್ನು ನಿರ್ಲಕ್ಷ್ಯಿಸಲಾಗಿದೆ. ರಫೇಲ್ ಡೀಲ್ ದೇಶದ ಕಳಂಕ. ಅನಿಲ್ ಅಂಬಾನಿಗೆ ಯಾವ ಅನುಭವ ಇದೆ ಎಂದು ಇಂತಹ ಮಹತ್ವದ ಗುತ್ತಿಗೆ ನೀಡಲಾಯಿತು. ಎಚ್‍ಎಎಲ್ ಕಂಪನಿ ಅನುಭವ ನಿರ್ಲಕ್ಷಕ್ಕೆ ಒಳಗಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ನಮ್ಮ ಪ್ರಶ್ನೆಗೆ ಎನ್‍ಡಿಎ ಸರ್ಕಾರದ ಬಳಿ ಉತ್ತರ ಇದೆ. ಆದರೆ ಅದನ್ನು ನೀಡದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.

ತೆಲಂಗಾಣದಲ್ಲಿ ನಮ್ಮ ಶಕ್ತಿ ಹೆಚ್ಚಾಗಿದೆ. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಅಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ತೆರಳುತ್ತೇವೆ. ಯಾವುದೇ ಒಬ್ಬ ನಾಯಕರ ನೇತೃತ್ವದಲ್ಲಿ ತೆರಳಲ್ಲ. ಇದು ಕಾಂಗ್ರೆಸ್ ಹಾಕಿಕೊಂಡಿರುವ ನಿಯಮ. ನಾವು ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎನ್ನುವುದು ಖಚಿತ ಎಂದರು.

ನೋಟು ಅಮಾನ್ಯೀಕರಣ ಹಾಗೂ ರಫೇಲ್ ಡೀಲ್ ಕೇಂದ್ರ ಸರ್ಕಾರದ ಅತಿದೊಡ್ಡ ತಪ್ಪು ನಿರ್ಧಾರವಾಗಿದೆ. ಪೆಟ್ರೋಲ್ ಬೆಲೆ ಹೆಚ್ಚಳಕ್ಕೆ ದುಬಾರಿ ಅಬಕಾರಿ ತೆರಿಗೆ ಕಾರಣ. ಅದನ್ನು ಕಡಿಮೆ ಮಾಡಿದರೆ ಪೆಟ್ರೋಲಿಯಂ ಬೆಲೆ ತಾನಾಗಿಯೇ  ಇಳಿಕೆ ಆಗಲಿದೆ. ಬಡ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Jaipal Reddy rafale deal ನಾಯಕತ್ವ ಅಮಾನ್ಯೀಕರಣ