‘ನೀರು ಕೊಡಿ ಇಲ್ಲವೇ ದಯಾಮರಣ ಕೊಡಿ’ ಪತ್ರ ಚಳವಳಿ


11-08-2018 261

ಬೆಂಗಳೂರು: ಮತ್ತೆ ಮೊಳಗಿದೆ ಮಹದಾಯಿ ಹೋರಾಟದ ಕಹಳೆ. ಮಹದಾಯಿ ರೈತ ಹೋರಾಟಗಾರು ಇಂದು ಬೃಹತ್ ಚಳವಳಿ ಆರಂಭಿಸಿದ್ದಾರೆ. "ಮಹದಾಯಿ ನೀರು ಕೊಡಿ ಇಲ್ಲವೇ ದಯಾಮರಣ ಕೊಡಿ" ಎಂದು ಆಗ್ರಹಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರ ನೇತೃತ್ವದಲ್ಲಿ ಪತ್ರ ಚಳುವಳಿ ಆರಂಭಿಸಿದ್ದಾರೆ. ದಯಾಮರಣ ಕೊಡಿ ಎಂದು ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲಿದ್ದು, ಸತ್ಯಾಗ್ರಹ ಆರಂಭಿಸಿದ್ದಾರೆ. ಮಹದಾಯಿ ವ್ಯಾಪ್ತಿಯ 10,000 ಮಂದಿ ರೈತರು, ‘ನೀರು ಕೊಡಿ ಇಲ್ಲವೇ ದಯಾಮರಣ ಕೊಡಿ’ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆಯಲಿದ್ದಾರೆ.

ಬೃಹತ್ ಚಳವಳಿ ಹಿನ್ನೆಲೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ನೂರಾರು ಮಹದಾಯಿ ರೈತ ಸೇನಾ ಹೋರಾಟಗಾರರು ಆಗಮಿಸುತ್ತಿದ್ದಾರೆ. ಮಹದಾಯಿ ಹೋರಾಟಗಾರ ವೀರೇಶ್ ಸೊಬರದಮಠ ನೇತೃತ್ವದಲ್ಲಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. "ಮಹಾತೀರ್ಪು" ಬರುವವರೆಗೂ ಪ್ರತಿಭಟನೆ ನಡೆಸಲಿದ್ದೇವೆ, ಇದೇ ತಿಂಗಳ 21ರ ತೀರ್ಪು ಬರುವವರೆಗೂ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ. ಮಹದಾಯಿ ಹೋರಾಟಗಾರರ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಸಾಥ್ ನೀಡಲಿದ್ದು, ನಾಳೆ 10 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Mahadayi Protest ಚಳವಳಿ ಹೋರಾಟ