ತೆಂಗಿನ ನಾರಿನ ಉದ್ಯಮ ಅಭಿವೃದ್ಧಿಗೆ: ಸಿಎಂ ಸೂಚನೆ


03-08-2018 214

ಬೆಂಗಳೂರು: ರಾಜ್ಯದ ತೆಂಗಿನ ನಾರಿನ ಉದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವರವಾದ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ತೆಂಗಿನ ನಾರಿನ ಮಹಾಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ತೆಂಗು ಬೆಳೆ ವ್ಯಾಪಕವಾಗಿದ್ದು, ತೆಂಗಿನ ನಾರು ಸ್ಥಳೀಯವಾಗಿ ಲಭ್ಯವಿರುವುದರಿಂದ ತೆಂಗಿನ ನಾರಿನ ಉತ್ಪನ್ನಗಳ ಉದ್ಯಮಗಳಿಗೆ ವಿಫುಲ ಅವಕಾಶವಿದೆ. ಇದು ಪರಿಸರ ಸ್ನೇಹಿ ಉತ್ಪನ್ನಗಳಾಗಿವೆ ಅಲ್ಲದೆ, ರೈತರಿಗೆ ತೆಂಗಿನ ನಾರಿಗೆ ಆದಾಯವೂ ದೊರೆಯುತ್ತದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಹೇರಳ ಉದ್ಯೋಗಾವಕಾಶವೂ ಇರುವುದರಿಂದ ಈ ಉದ್ಯಮಕ್ಕೆ ಉತ್ತೇಜನ ನೀಡುವುದು ಸೂಕ್ತವಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಪ್ರಸ್ತಾವನೆ ಸಲ್ಲಿಸುವಾಗ ಸೃಷ್ಟಿಯಾಗುವ ಉದ್ಯೋಗಾವಕಾಶ, ತರಬೇತಿಯ ಅಗತ್ಯತೆ, ಮಾರುಕಟ್ಟೆ ಅವಕಾಶಗಳು, ಇತರ ರಾಜ್ಯಗಳಲ್ಲಿ ಈ ಉದ್ದಿಮೆಯ ಕಾರ್ಯನಿರ್ವಹಣೆ ಇವೆಲ್ಲವುಗಳನ್ನೂ ಪರಿಶೀಲಿಸಿ ತೆಂಗಿನ ನಾರಿನ ಉತ್ಪನ್ನಗಳ ಉದ್ಯಮ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಅಗತ್ಯ ಸೌಲಭ್ಯ ಮೊದಲಾದ ಎಲ್ಲ ವಿಷಯಗಳ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ಇದಲ್ಲದೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಈ ಉದ್ಯಮಕ್ಕೆ ನೆರವು ಪಡೆಯಲು ಇರುವ ಅವಕಾಶಗಳನ್ನು ಸಹ ಪರಿಶೀಲಿಸುವಂತೆ ತಿಳಿಸಿದರು.

ಸದ್ಯ ಈ ಎರಡು ಸಂಸ್ಥೆಗಳು ತೆಂಗಿನ ನಾರು, ಹುರಿ, ಮ್ಯಾಟ್, ಮ್ಯಾಟಿಂಗ್, ರಬ್ಬರೈಸ್ಡ್ ಕಾಯರ್ ಹಾಸಿಗೆ, ದಿಂಬು, ಕಾಯರ್‍ಕಾಂಪೊಸಿಟ್ ಬೋರ್ಡ್‍ಗಳಿಂದ ಶಾಲಾ ಡೆಸ್ಕ್, ಟೇಬಲ್ ಇತ್ಯಾದಿಗಳ ಉತ್ಪಾದನೆ ನಡೆಯುತ್ತಿದೆ. ಜೊತೆಗೆ ಕಾಯರ್ ಭೂವಸ್ತ್ರವನ್ನು ರಸ್ತೆ ನಿರ್ಮಾಣ, ರಸ್ತೆಗಳ ಎಂಬ್ಯಾಂಕ್‍ಮೆಂಟ್, ನದಿ/ಕೆರೆಗಳ ದಡ ರಕ್ಷಣೆ, ಕೃಷಿ ಹೊಂಡಗಳಲ್ಲಿ ಲೋಕೋಪಯೋಗಿ, ನೀರಾವರಿ, ಅರಣ್ಯ ಕೃಷಿ, ತೋಟಗಾರಿಕೆ ಇಲಾಖೆಗಳ ವಿವಿಧ ಯೋಜನೆಗಳಲ್ಲಿ ಬಳಸಬಹುದಾಗಿರುತ್ತದೆ. ಇವುಗಳ ಗುಣಮಟ್ಟದ ಕುರಿತು ಪ್ರಮಾಣೀಕರಣವನ್ನೂ ಪಡೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಈ ಹಿನ್ನೆಲೆಯಲ್ಲಿ ವಿವರವಾದ ಪ್ರಸ್ತಾವನೆ ಹಾಗೂ ತೆಂಗಿನ ನಾರಿನ ಉತ್ಪನ್ನಗಳನ್ನು ಬಳಸಬಹುದಾದ ವಿವಿಧ ಇಲಾಖೆಗಳೊಂದಿಗೆ ಚರ್ಚಿಸಲು ಮತ್ತೊಂದು ಸಭೆ ಶೀಘ್ರವೇ ಕರೆದು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ಶಾಸಕ ಸಿ.ಎನ್.ಬಾಲಕೃಷ್ಣ, ಮಧ್ಯಮ, ಸಣ್ಣ ಹಾಗೂ ಅತಿಸಣ್ಣ ಕೈಗಾರಿಕೆಗಳ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಆರ್ಥಿಕ ಇಲಾಖೆ ಕಾರ್ಯದರ್ಶಿ ಏಕ್‍ರೂಪ್ ಕೌರ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ನಿರ್ದೇಶಕರಾದ ಡಾ.ಬಿ.ಆರ್.ಮಮತಾ ಮೊದಲಾದವರು ಹಾಜರಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Jute H.D.Kumaraswamy ಜೀವನೋಪಾಯ ನಿರ್ದೇಶಕ