ಸ್ವಚ್ಛತೆಯಲ್ಲಿ ಕರ್ನಾಟಕ ಆಗಲಿದೆ ನಂ 1: ಡಿಸಿಎಂ


02-08-2018 325

ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಛತೆ ಬಗ್ಗೆ ನಡೆಸುತ್ತಿರುವ ಸಮೀಕ್ಷೆಯಲ್ಲಿ ಕರ್ನಾಟಕವೇ ಮೊದಲ ಸ್ಥಾನ ಪಡೆದುಕೊಳ್ಳುವ ವಿಶ್ವಾಸವಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018, ಸ್ವಚ್ಛ ಮೇವ ಜಯತೆ ಎಂಬ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛತೆ ಎಂಬುದು ನಮ್ಮ ಜೀವನದ ಭಾಗವಾಗಿರಬೇಕು. ಮನೆ, ಸುತ್ತಲಿನ ಪರಿಸರ, ಬೀದಿ ಹೀಗೆ ಎಲ್ಲೆಡೆ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಇಡೀ ಸಮಾಜ ಸ್ವಚ್ಛ ಮತ್ತು ಶುಭ್ರವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ 2014ರ ಅಕ್ಟೋಬರ್ 2, ಗಾಂಧಿ ಜಯಂತಿ ದಿನದಂದು ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮ ಪ್ರಾರಂಭಿಸಿದರು. ಈ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾರ ಈಗ 680 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆ. ನಮ್ಮ ರಾಜ್ಯ ಅಭಿವೃದ್ಧಿ ಪಥದಲ್ಲಿರುವ ರಾಜ್ಯಗಳ ಪೈಕಿ ಮುಂಚೂಣಿಯಲ್ಲಿದೆ. ಈಗಾಗಲೇ ರಾಜ್ಯಾದ್ಯಂತ 22 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಉಳಿಕೆ 5 ಲಕ್ಷ ಶೌಚಾಲಯವನ್ನು ಇದೇ ಅಕ್ಟೋಬರ್ 2ರೊಳಗೆ ಪೂರ್ಣಗೊಳಿಸಲಿದ್ದೇವೆ. ಕೇಂದ್ರ ಸರ್ಕಾರ ಬಯಲು ಬಹಿರ್ದೆಸೆ ಮುಕ್ತ ರಾಜ್ಯಗಳ ಘೋಷಣೆಯಲ್ಲಿ ನಮ್ಮ ರಾಜ್ಯವೂ ಸೇರ್ಪಡೆಗೊಳ್ಳುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಸ್ವಚ್ಛತೆ ಎಂಬುದು ದೊಡ್ಡ ಸವಾಲು. ಅದಕ್ಕಾಗಿಯೇ ಕಾರ್ಯಕ್ರಮದ ಅನುಷ್ಠಾನಕ್ಕೆ ಮಕ್ಕಳನ್ನು ರಾಯಭಾರಿಯನ್ನಾ ಮಾಡಿದ್ದೇವೆ. ಹೊರರಾಷ್ಟ್ರಗಳಲ್ಲಿ ಪೋಷಕರು ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಪಾಠ ಹೇಳುತ್ತಾರೆ. ನಾವು ಮಕ್ಕಳಿಂದಲೇ ಪೋಷಕರಿಗೆ ಪಾಠ ಹೇಳಿಸುವ ಮೂಲಕ ಪ್ರಬಲವಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಮತ್ತಿತರರು ಪಾಲ್ಗೊಂಡಿದ್ದರು.


ಒಂದು ಕಮೆಂಟನ್ನು ಬಿಡಿ