ಐಟಿ ರಿಟರ್ನ್ಸ್ ಸಲ್ಲಿಕೆ ಆಯ್ತ?


20-07-2018 425

ಬೆಂಗಳೂರು: ವೈಯಕ್ತಿಕ ತೆರಿಗೆದಾರರು, ವೇತನ ಪಡೆಯುವರು, ನಿವೃತ್ತ ನೌಕರರು ತಮ್ಮ ಆದಾಯ ತೆರಿಗೆ ವಿವರಗಳನ್ನು ಜುಲೈ 31ರ ಒಳಗಾಗಿ ಸಲ್ಲಿಸಬೇಕು. ವಾರ್ಷಿಕ ಆದಾಯ 2.5ಲಕ್ಷ ರೂಪಾಯಿ ಮೀರಿದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕಡ್ಡಾಯ. ಹಿರಿಯ ನಾಗರಿಕರು ಅಂದರೆ 60-80 ವರ್ಷ ವಯಸ್ಸಿನ ಒಳಗಿರುವರಿಗೆ ಈ ಮಿತಿ 3 ಲಕ್ಷ ರೂಪಾಯಿ ಆಗಿದೆ. 80ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5ಲಕ್ಷ ರೂಪಾಯಿ ಆದಾಯದವರೆಗೆ ಆದಾಯ ತೆರಿಗೆ ವಿವರ ಸಲ್ಲಿಸಬೇಕಾಗಿಲ್ಲ.

ಯಾರಿಗೆ ಎಷ್ಟು ತೆರಿಗೆ: 2.5-5ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಶೇಕಡ 5ರಷ್ಟು ತೆರಿಗೆ, 5-10 ಲಕ್ಷ ರೂಪಾಯಿ ವರೆಗೆ ಶೇಕಡ 20ರಷ್ಟು ಮತ್ತು 10ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ ಪಾವತಿಸಬೇಕು.

ತೆರಿಗೆ ವಿವರ ಸಲ್ಲಿಕೆ ಹೇಗೆ?: ತೆರಿಗೆದಾರರು ತಾವೇ ಸ್ವತಃ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಹಾಗೆ ಮಾಡಲಾಗದವರು ತೆರಿಗೆ ಸಲಹೆಗಾರರು ಇಲ್ಲವೆ ಚಾರ್ಟರ್ಡ್ ಅಕೌಂಟೆಂಟ್ ರನ್ನು ಸಂಪರ್ಕಿಸಿ ಅವರ ಮೂಲಕ ರಿಟರ್ನ್ಸ್ ಸಲ್ಲಿಸಬಹುದು.

ಮೊದಲ ಬಾರಿಗೆ ಆನ್ ಲೈನ್ ಮೂಲಕ ಆದಾಯ ತೆರಿಗೆ ವಿವರ ಸಲ್ಲಿಸುವವರು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಪೋರ್ಟಲ್(www.income taxindiaefiling.gov.in)ನಲ್ಲಿ ನೋಂದಾಯಿಸಿ ಕೊಳ್ಳಬೇಕು. ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯೇ ಯೂಸರ್ ಐಡಿ ಆಗಿರುತ್ತದೆ. ಫಾರ್ಮ್ 16, ಫಾರ್ಮ್ 26 ಎಎಸ್, ಬ್ಯಾಂಕ್ ಸ್ಟೇಟ್ ಮೆಂಟ್, ಕಳೆದ ವರ್ಷ ಸಲ್ಲಿಸಿದ ರಿಟರ್ನ್ಸ್ ನ ಪ್ರತಿ, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದರೆ ಅವುಗಳ ಕ್ಯಾಪಿಟಲ್ ಗೇನ್ ಸ್ಟೇಟ್ ಮೆಂಟ್, ಬ್ಯಾಂಕ್ ಅಕೌಂಟ್ ಸಂಖ್ಯೆ, ಬ್ಯಾಂಕಿನ ಐಎಫ್ಎಸ್ಸಿ ಕೋಡ್, ಆಧಾರ್ ಸಂಖ್ಯೆ ಜೊತೆಯಲ್ಲಿ ಇರಲಿ.

ಯಾವುದು ಆದಾಯ? ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 14ರ ಅನ್ವಯ-ಭತ್ಯೆಗಳು ಮತ್ತು ಸಂಭಾವನೆಯನ್ನು ಒಳಗೊಂಡ ವೇತನ /ನಿವೃತ್ತಿ ವೇತನ. ಮನೆ ಬಾಡಿಗೆ ಆದಾಯ, ವ್ಯಾಪಾರ-ಉದ್ದಿಮೆಯಿಂದ ಗಳಿಸಿದ ಲಾಭ, ಬ್ಯಾಂಕ್ ಬಡ್ಡಿ, ಹೂಡಿಕೆಯ ಮೇಲೆ ಗಳಿಸಿದ ಬಡ್ಡಿಯ ಆದಾಯ, ದೀರ್ಘಾವಧಿ ಮತ್ತು ಅಲ್ಪಾವಧಿ ಲಾಭಗಳಿಕೆ.

ತೆರಿಗೆ ಕಡಿತದ ಸೌಲಭ್ಯ: 2.5 ಲಕ್ಷ ರೂಪಾಯಿಗೂ ಅಧಿಕ ಆದಾಯ ಇರುವವರು ನಾನಾ ಸಾಧನಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಕಡಿತದ ಸೌಲಭ್ಯಗಳನ್ನು ಪಡೆಯಬಹುದು. ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅವಕಾಶವಿದೆ. ಇದಕ್ಕಾಗಿ ಹೂಡಿಕೆಯ ಆಧಾರಗಳನ್ನು ಒದಗಿಸಬೇಕಾಗುತ್ತದೆ.

ಫಾರ್ಮ್ 16: ವೇತನದಾರರಿಗೆ ಅವರ ವೇತನ ಖಾತೆಗೆ ಜಮೆಯಾಗುವುದಕ್ಕೆ ಮೊದಲೇ ಮೂಲದಲ್ಲಿಯೇ ತೆರಿಗೆ ಕಡಿತವಾಗಿರುತ್ತದೆ. ಇದನ್ನೇ ಟಿಡಿಎಸ್ ಎನ್ನುವುದು. ವೇತನ ವಿವರ, ತೆರಿಗೆ ಕಡಿತ, ವೈಯಕ್ತಿಕ ವಿವರಗಳು ಇರುವ ದಾಖಲೆಯ ಉದ್ಯೋಗದಾತರು ನೀಡುವ ಫಾರ್ಮ್-16. ಇದರಲ್ಲಿ ಎರಡು ವಿಭಾಗ ಇರುತ್ತದೆ. ಫಾರ್ಮ್-16ಎ ಮತ್ತು ಫಾರ್ಮ್-16ಬಿ. ಇದು ರಿಟರ್ನ್ಸ್ ಸಲ್ಲಿಕೆಗೆ ಕಡ್ಡಾಯವಾಗಿ ಬೇಕಾದ ದಾಖಲೆ. ವೇತನದಾರರಾಗಿದ್ದು, ಇತರ ಮೂಲಗಳಿಂದ ಆದಾಯ ಇದ್ದರೆ ಅಂತಹ ಸಂದರ್ಭದಲ್ಲಿ ಆ ಆದಾಯಗಳನ್ನು ಘೋಷಿಸ ಬೇಕಾಗುತ್ತದೆ.

ಐಟಿಆರ್ ಪ್ರಕ್ರಿಯೆ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ನಂತರ ಆನ್‌ ಲೈನ್ ಮೂಲಕ ಇ-ವೆರಿಫಿಕೇಷನ್ ಮಾಡಬೇಕು. ನೆಟ್ ಬ್ಯಾಂಕಿಂಗ್, ಆಧಾರ್ ಕಾರ್ಡ್ ಒಟಿಪಿ, ಸರ್ಕಾರದ ಇ-ಫೈಲಿಂಗ್ ಪೋರ್ಟಲ್ ವಿಧಾನಗಳ ಮೂಲಕ ಇದನ್ನು ನಿರ್ವಹಿಸಬಹುದು.

ಕೃಷಿ ಆದಾಯಕ್ಕೆ ತೆರಿಗೆ ಇಲ್ಲ: ಕೃಷಿ ಮೂಲದ ಆದಾಯ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(1) ರ ಪ್ರಕಾರ ತೆರಿಗೆ ಮುಕ್ತ. ಹೀಗಿದ್ದರೂ ತೆರಿಗೆ ದರವನ್ನು ನಿರ್ಣಯಿಸುವ ಸಲುವಾಗಿ ಕೃಷಿ ಮೂಲದ ಆದಾಯವನ್ನು ರಿಟರ್ನ್ಸ ನಲ್ಲಿ ತೋರಿಸಬೇಕು.

ಅಪ್ಪಟ ಕೃಷಿ ಮೂಲದ ಆದಾಯ ಕೋಟ್ಯಂತರ ರೂಪಾಯಿಗಳಾಗಿದ್ದರೂ ಅದು ತೆರಿಗೆ ಮುಕ್ತ ಆದಾಯ. ಆದರೆ, ಕೃಷಿ ಆದಾಯದ ಜೊತೆಗೆ ಇತರೆ ಉದ್ಯೋಗದಿಂದ ವೇತನ ಪಡೆಯುತ್ತಿದ್ದರೆ ಅದನ್ನು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ತೋರಿಸಿ ಅದಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ.

ಕೃಷಿ ಆದಾಯ ಯಾವುದು:

* ಕೃಷಿ ಚಟುವಟಿಕೆಗಳಿಗೆ ಬಳಸಿದ ಭೂಮಿಯಿಂದ ದೊರೆಯುವ ಆದಾಯ .

*ಕೃಷಿ ಭೂಮಿಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರಾಟದಿಂದ ಬಂದ ಆದಾಯ.

*ಫಾರ್ಮ್ ಹೌಸ್ ನಿಂದ ಪಡೆದ ಆದಾಯ.

*ನರ್ಸರಿಗಳಲ್ಲಿ ಸಸಿಗಳ ಬೆಳೆಸುವಿಕೆ ಮತ್ತು ಬೀಜಗಳ ಮಾರಾಟದಿಂದ ಬಂದ ಆದಾಯ.

ಯಾವುದು ಕೃಷಿ ಆದಾಯವಲ್ಲ:

* ಕೋಳಿ, ಜೇನು ಮತ್ತು ಮೀನು ಸಾಕಣೆಯಿಂದ ಬಂದ ಆದಾಯ.

*ಬೆಳೆದು ನಿಂತ ಫಸಲಿನ ಖರೀದಿ.

*ಕಂಪನಿಯೊಂದರ ಕೃಷಿ ಆದಾಯದ ಲಾಭಾಂಶ.

*ತನ್ನಿಂತಾನೆ ಬೆಳೆದಿರುವ ಮರಗಳ ಮಾರಾಟದಿಂದ ಬಂದ ಆದಾಯ.

*ಉಪ್ಪಿನ ಮಾರಾಟದಿಂದ ಬಂದ ಆದಾಯ.

*ಗಣಿಗಾರಿಕೆಯ ಗೌರವಧನ

*ಫಾರ್ಮ್ ಹೌಸ್ ನಲ್ಲಿ ಟಿವಿ ಧಾರಾವಾಹಿ ಚಿತ್ರೀಕರಣದಿಂದ ಬಂದ ಆದಾಯ.


ಒಂದು ಕಮೆಂಟನ್ನು ಬಿಡಿ