ನಾಳೆ ಔಷಧಿಗಳು ದೊರೆಯುವುದಿಲ್ಲ !


29-05-2017 341

ಬೆಂಗಳೂರು:- ಜಿಎಸ್‍ಟಿ ವಿರೋಧಿಸಿ ನಾಳೆ ಹೊಟೇಲ್ ಮಾಲೀಕರು ಬಂದ್ ಗೆ ಕರೆ ಕೊಟ್ಟಿದ್ದರೆ, ಆನ್‍ಲೈನ್‍ನಲ್ಲಿ ಔಷಧಿ ಖರೀದಿ ವಿರೋಧಿಸಿ ಮೆಡಿಕಲ್ ಶಾಪ್‍ನವರು ಬಂದ್‍ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಹೊಟೇಲ್ ಮತ್ತು ಔಷಧಿಗಳು ದೊರೆಯುವುದಿಲ್ಲ. ಸಾರ್ವಜನಿಕರು ಮೊದಲೇ ಎಚ್ಚೆತ್ತುಕೊಳ್ಳಬೇಕು. ಯಾವುದೇ ಸಂದರ್ಭ ಬಂದರೂ, ಎಂತಹ ಪ್ರತಿಭಟನೆಗಳು ನಡೆದರೂ ಮೆಡಿಕಲ್ ಸ್ಟೋರ್‍ಗಳು ತೆರೆದಿರುತ್ತಿದ್ದವು. ಆದರೆ ಇದೀಗ ಇವರೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ನಾಳೆ ಇಡೀ ದಿನ ಹೊಟೇಲ್‍ಗಳು, ರೆಸ್ಟೋರೆಂಟ್‍ಗಳು ಬಂದ್ ಆಗಲಿವೆ. ಊಟ, ತಿಂಡಿಗೆ ಹೊಟೇಲ್‍ಗಳನ್ನು ಅವಲಂಬಿಸಿರುವ ಬಹುತೇಕ ಮಂದಿಗೆ ಇದರಿಂದ ತೊಂದರೆಯಾಗುವುದು ಸಹಜ. ಇವರೆಲ್ಲ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹೊಟೇಲ್‍ಗಳಷ್ಟೇ ಅಲ್ಲ, ಬೇಕರಿಗಳು ಸಹ ತೆರೆದಿರುವುದಿಲ್ಲ. ಜಿಎಸ್‍ಟಿಯಲ್ಲಿ ಹೊಟೇಲ್ ಉದ್ಯಮದ ಮೇಲೆ ಅಧಿಕ ತೆರಿಗೆ ವಿಧಿಸಲು ಮುಂದಾಗಿರುವುದನ್ನು ವಿರೋಧಿಸಿ ಹೊಟೇಲ್ ಮಾಲೀಕರ ಸಂಘಟನೆಗಳು ನಾಳೆ ಪ್ರತಿಭಟನೆ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ವೈದ್ಯರ ಪ್ರಿಸ್‍ಕ್ರಿಪ್ಷನ್ ಇಲ್ಲದಿದ್ದರೂ ಆನ್‍ಲೈನ್ ಮೂಲಕ ಔಷಧಿ ಖರೀದಿಸಲು ಅನುಮತಿ ನೀಡಿರುವ ಸರ್ಕಾರದ ಕ್ರಮ ಖಂಡಿಸಿ ಮೆಡಿಕಲ್ ಸ್ಟೋರ್‍ನವರು ಬಂದ್ ಆಚರಿಸುತ್ತಿದ್ದಾರೆ.