ಶೀಘ್ರದಲ್ಲೇ ಬೆಂಗಳೂರಿಗೆ ಹೊಸ ಪೊಲೀಸ್ ಆಯುಕ್ತರ ನೇಮಕ?


18-07-2018 361

ಬೆಂಗಳೂರು: ಗೃಹ ಇಲಾಖೆಗೆ ಕಾಯಕಲ್ಪ ನೀಡಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಭದ್ರಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರ ಬೆಂಗಳೂರು ಮಹಾನಗರಕ್ಕೆ ಸದ್ಯದಲ್ಲೆ ಹೊಸ ಪೊಲೀಸ್ ಆಯುಕ್ತರ ನೇಮಿಸುವ ಸಾಧ್ಯತೆಯಿದೆ. ಟಿ.ಸುನೀಲ್‍ಕುಮಾರ್ ಅವರು ನಗರ ಪೊಲೀಸ್ ಆಯುಕ್ತರಾಗಿ ಈ ತಿಂಗಳ ಅಂತ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಅತ್ಯಂತ ಪ್ರತಿಷ್ಠಿತ ಮತ್ತು ಸವಾಲಿನ ಹುದ್ದೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದವರನ್ನು ಮುಂದುವರೆಸುವ ಸಾಧ್ಯತೆಗಳು ವಿರಳ.

ಒಂದುವೇಳೆ ಟಿ.ಸುನೀಲ್‍ಕುಮಾರ್ ಅವರನ್ನು ಆಯುಕ್ತರ ಹುದ್ದೆಯಿಂದ ವರ್ಗಾವಣೆಗೊಂಡರೆ ತೆರವಾಗಲಿರುವ ಈ ಸ್ಥಾನಕ್ಕೆ ಪ್ರಮುಖವಾಗಿ ಐದು ಹೆಸರುಗಳು ಕೇಳುಬರುತ್ತಿವೆ. ಸಾಮಾನ್ಯವಾಗಿ ಬೆಂಗಳೂರು ಮಹಾನಗರಕ್ಕೆ ಪೊಲೀಸ್ ಆಯುಕ್ತರನ್ನು ನೇಮಕ ಮಾಡಬೇಕಾದರೆ ಸೇವಾ ಹಿರಿತನದ ಜೊತೆಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಕೃಪಾಕಟಾಕ್ಷ ಇರಬೇಕಾಗುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಒಲವು ಯಾರ ಮೇಲೆ ಬೀರಲಿದೆ ಎಂಬುದರ ಮೇಲೆ ಹೊಸ ಆಯುಕ್ತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಸುನೀಲ್‍ ಕುಮಾರ್ ವರ್ಗಾವಣೆಯಾದರೆ ಈ ಸ್ಥಾನಕ್ಕೆ ಕೆಎಸ್‍ಆರ್ಪಿಯ ಎಡಿಜಿಪಿ ಭಾಸ್ಕರ್ ರಾವ್, ಎಸಿಬಿಯ ಎಡಿಜಿಪಿ ಅಲೋಕ್ ಮೋಹನ್, ಆಂತರಿಕ ಭದ್ರತೆಯ ಎಡಿಜಿಪಿ ಪ್ರತಾಪ್ ರೆಡ್ಡಿ , ಕರ್ನಾಟಕ ಕೈಮಗ್ಗ ಅಭಿವೃದ್ಧಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಪಿ.ಶರ್ಮ ಹಾಗೂ ಸುನೀಲ್ ಅಗರ್ವಾಲ್ ಅವರುಗಳ ಹೆಸರುಗಳು ಕೇಳಿಬರುತ್ತಿವೆ.  ಒಂದು ವರ್ಷದ ಹಿಂದೆ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಸುನೀಲ್‍ ಕುಮಾರ್ ಅವರ ವಿರುದ್ಧ ಯಾವುದೇ ಗುರುತರ ಆರೋಪಗಳು ಕೇಳಿಬಂದಿಲ್ಲ. ಅಲ್ಲದೆ ಕಾನೂನು ಸುವ್ಯವಸ್ಥೆ, ರೌಡಿ ಚಟುವಟಿಕೆಗಳನ್ನು ನಿಗ್ರಹಿಸಿರುವುದು, ಅಪರಾಧಗಳ ನಿಯಂತ್ರಣ ಸೇರಿದಂತೆ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಹೀಗಾಗಿ ಇಲಾಖೆಯಲ್ಲಾಗಲಿ, ಸರ್ಕಾರದ ಮಟ್ಟದಲ್ಲಾಗಲಿ ಅವರ ಕಾರ್ಯ ವೈಖರಿ ಬಗ್ಗೆ ಯಾವುದೇ ರೀತಿಯ ಅಸಮಾಧಾನ ಕೇಳಿಬಂದಿಲ್ಲ.

ಆದರೆ ಸುನೀಲ್ ಕುಮಾರ್ ನಿರೀಕ್ಷಿತ ಮಟ್ಟದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾಗಿರುವುದು ಹಾಗೂ ಕೆಳಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಸಣ್ಣದೊಂದು ಅಸಮಾಧಾನವಿದೆ.  ಬೆಂಗಳೂರಿನಲ್ಲಿ ಪದೇ ಪದೇ ಉಂಟಾಗುತ್ತಿರುವ ರೌಡಿ ಚಟುವಟಿಕೆಗಳ ನಿಗ್ರಹ, ವಿದೇಶಿ ಪ್ರಜೆಗಳ ಪುಂಡಾಟಿಕೆಗೆ ಕ್ರಮ, ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ವಿಫಲರಾಗಿರುವುದು, ಇಲಾಖೆಯಲ್ಲಿ ನಡೆಯತ್ತಿರುವ ವಸೂಲಿ ದಂಧೆಯನ್ನು ನಿಯಂತ್ರಣ ಮಾಡದಿರುವುದು ಸೇರಿದಂತೆ ಸಮನ್ವಯ ಸಾಧಿಸುವಲ್ಲಿ ಸುನೀಲ್‍ಕುಮಾರ್ ಅಷ್ಟು ಯಶಸ್ಸು ಕಾಣಲಿಲ್ಲ.

ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಪ್ರಾಮಾಣಿಕ ಅಧಿಕಾರಿಗಳ ಜೊತೆಗೆ ಕಟ್ಟುನಿಟ್ಟಿನ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರಿಗಳು ಬರಬೇಕೆಂಬ ಒತ್ತಡ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಅಲ್ಲದೆ ಸಾಮಾನ್ಯವಾಗಿ ಒಂದು ವರ್ಷ ಪೂರ್ಣಗೊಳಿಸಿದವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲು ಸರ್ಕಾರ ಒಲವು ತೋರುವುದಿಲ್ಲ. ಈ ಹಿಂದೆ ಕೆಲವರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರೂ ಈಗಿರುವ ದೋಸ್ತಿ ಸರ್ಕಾರ ಸುನೀಲ್‍ ಕುಮಾರ್ ಅವರನ್ನು ಮುಂದುವರೆಸುವ ಬಗ್ಗೆ ಒಲವು ಹೊಂದಿಲ್ಲ ಎಂದು ತಿಳಿದು ಬಂದಿದೆ.  ಈಗಾಗಲೇ ಗೃಹ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೂಕ್ತ ಮತ್ತು ಅರ್ಹ ಹಿರಿಯ ಅಧಿಕಾರಿಯೊಬ್ಬರನ್ನು ಸೂಚಿಸಬೇಕೆಂದು ಸಲಹೆ ಮಾಡಿದ್ದಾರೆ.

ಒಂದು ವೇಳೆ ಟಿ.ಸುನೀಲ್‍ಕುಮಾರ್ ನಗರ ಪೊಲೀಸ್ ಆಯುಕ್ತರ ಹುದ್ದೆಯಿಂದ ವರ್ಗಾವಣೆಯಾದರೆ ತೆರವಾಗಲಿರುವ ಈ ಸ್ಥಾನಕ್ಕೆ ಪ್ರಮುಖವಾಗಿ ಐದು ಹೆಸರುಗಳು ಕೇಳಿಬಂದಿವೆ.

ಭಾಸ್ಕರ್ ರಾವ್: 1990ನೇ ಐಪಿಎಸ್ ಬ್ಯಾಚ್‍ನ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಪ್ರಸ್ತುತ ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್‍ಆರ್ಪಿ) ಎಡಿಜಿಪಿಯಾಗಿದ್ದಾರೆ. ಈ ಹಿಂದೆಯೂ ಬೇರೆ ಬೇರೆ ಭಾಗಗಳಲ್ಲಿ ಸೇವೆ ಸಲ್ಲಿಸಿ ಸರ್ಕಾರದ ಪ್ರಶಂಸೆಗೆ ಕಾರಣರಾಗಿದ್ದರು. ಅಲ್ಲದೆ ಬೆಂಗಳೂರಿನ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಜ್ಞಾನ ಇರುವುದರಿಂದ ಸಹಜವಾಗಿ ಅವರ ಹೆಸರು ಆಯುಕ್ತರ ಹುದ್ದೆಗೆ ಕೇಳಿಬರುತ್ತಿದೆ.

ಅಲೋಕ್ ಮೋಹನ್: 1987ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಮೋಹನ್ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯೆಂದೇ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಎಡಿಜಿಪಿಯಾಗಿರುವ ಅವರು ಈ ಹಿಂದೆ ಇಲಾಖೆಯಲ್ಲಿ ನಾನಾ ಕಡೆ ಸೇವೆ ಸಲ್ಲಿಸಿದ್ದಾರೆ. ಎಂಥದ್ದೇ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ಚಾಕಚಕ್ಯತೆ ಅಲ್ಲದೆ ಕೆಳಹಂತದ ಅಧಿಕಾರಿಗಳ ಜೊತೆ ಸಮನ್ವಯತೆ ಸಾಧಿಸುವಲ್ಲಿ ಪಳಗಿರುವ ಅಧಿಕಾರಿ.

ಪ್ರತಾಪ್ ರೆಡ್ಡಿ :1991ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಪ್ರತಾಪ್ ರೆಡ್ಡಿ ನಗರ ಪೊಲೀಸ್ ಆಯುಕ್ತ ಹುದ್ದೆ ಮೇಲೆ ಕಣ್ಣಿಟ್ಟಿರುವುದು ಗುಟ್ಟಾಗೇನೂ ಉಳಿದಿಲ್ಲ. ಆಂತರಿಕ ಭದ್ರತೆಯ ಎಡಿಜಿಪಿ ಆಗಿರುವ ಅವರು ಹಿಂದೆ ಸಿಐಡಿ ವಿಭಾಗದಲ್ಲಿ ಎಡಿಜಿಪಿಯಾಗಿದ್ದು, ಅತ್ಯಂತ ಕ್ಲಿಷ್ಟ ಪ್ರಕರಣಗಳನ್ನು ಭೇದಿಸಿದ್ದರು.

ಆರ್.ಪಿ.ಶರ್ಮ: ಕರ್ನಾಟಕ ಕೈ ಮಗ್ಗ ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಪಿ.ಶರ್ಮ ಈ ಹಿಂದೆ ಬಿಎಂಟಿಎಫ್‍ನ ಮುಖ್ಯಸ್ಥರಾಗಿದ್ದ ವೇಳೆ ಸಾಕಷ್ಟು ವಿವಾದ ಸೃಷ್ಟಿಸಿದ್ದರು. ಯಾರ ಮಾತನ್ನೂ ಕೇಳದೆ, ಯಾರಿಗೂ ಜಗ್ಗದೇ ಆನೆ ನಡೆದದ್ದೇ ದಾರಿ ಎಂಬಂತೆ ತಮ್ಮಿಷ್ಟಕ್ಕೇ ತಾವೇ ಸ್ವಯಂ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ಶರ್ಮ ಕೂಡ ಆಯುಕ್ತರ ರೇಸ್‍ನಲ್ಲಿದ್ದಾರೆ. ಆದರೆ ಅವರ ಸ್ವಯಂ ನಿರ್ಧಾರಗಳೇ ಅವರಿಗೆ ಮುಳುವಾಗಿ ಪರಿಣಮಿಸಿದೆ.

ಸುನೀಲ್ ಅಗರ್ವಾಲ್:ಎಡಿಜಿಪಿ ಸುನೀಲ್ ಅಗರವಾಲ್ ಕೂಡ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯೆಂದೇ ಹೆಸರು ಗಳಿಸಿದ್ದಾರೆ. ರಾಜ್ಯದ ನಾನಾ ಕಡೆ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಗರ ಪೊಲೀಸ್ ಆಯುಕ್ತರು ಡಿಜಿಪಿ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಆಯ್ಕೆ ಮಾಡುವಾಗ ಏಕಪಕ್ಷೀಯ ನಿರ್ಧಾರವನ್ನು ಕೈಗೊಳ್ಳಲಾಗುತ್ತಿತ್ತು. ಆದರೆ ಇದು ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಉಭಯ ಪಕ್ಷಗಳ ಮುಖಂಡರು ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

T suneel kumar commissioner ಎಡಿಜಿಪಿ ವಿಫಲ