ಮನೆ ಕೆಲಸದಾಕೆಯಿಂದ ಉದ್ಯಮಿ ಪತ್ನಿಗೆ ಕೋಟ್ಯಾಂತರ ಹಣ ವಂಚನೆ!


17-07-2018 302

ಬೆಂಗಳೂರು: ಆಧ್ಯಾತ್ಮದ ಹೆಸರಿನಲ್ಲಿ ಉದ್ಯಮಿಯೊಬ್ಬರ ಪತ್ನಿಗೆ ಮನೆ ಕೆಲಸದಾಕೆ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ವಂಚಿಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ. ಕೋರಮಂಗಲದ 4ನೇ ಹಂತದ ಬ್ಲಾಕ್‍ನ ಉದ್ಯಮಿ ಜಯಂತ್ ಪತ್ನಿ ಯೋಗಿಣಿಗೆ ಕೆಲಸದಾಕೆ. ರೇಷ್ಮಾ ವಂಚಿಸಿ ಪರಾರಿಯಾಗಿದ್ದು ಕೃತ್ಯವು ತಡವಾಗಿ ಬೆಳಕಿಗೆ ಬಂದಿದೆ.

ಬಾಬಾ ಪೂಜೆ: ಆಧ್ಮಾತ್ಮದ ಕಡೆ ಯೋಗಿಣಿ ಹೆಚ್ಚಿನ ಒಲವು ಬೆಳೆಸಿಕೊಂಡಿದ್ದನ್ನು ದುರುಪಯೋಗಪಡಿಸಿಕೊಂಡ  ರೇಷ್ಮಾ ಕಳೆದ ಫೆಬ್ರುವರಿಯಲ್ಲಿ ಬಾಬಾ ಮೂರ್ತಿಗೆ ಆಭರಣ ಇಟ್ಟು ಪೂಜೆ ಮಾಡಿದರೆ ಶ್ರೇಯಸ್ಸು ಬರುತ್ತದೆ ಎಂದು ನಂಬಿಸಿದ್ದಳು.

ಬಾಬಾ ಮೂರ್ತಿಯ ಹೊಸ ಕಥೆ ಹೆಣೆದ ರೇಷ್ಮಾ, ಮಂಡ್ಯದ ತಮ್ಮ ಜಮೀನಿನಲ್ಲಿ ಅಗೆಯುತ್ತಿದ್ದಾಗ ಚಿನ್ನಾಭರಣ ಹಾಗೂ ಬಾಬಾ ಮೂರ್ತಿ ಪ್ರತಿಮೆ ಸಿಕ್ಕಿದೆ. ಬಾಬಾ ಪ್ರತಿಷ್ಠಾಪನೆಗಾಗಿ ಸ್ಥಳ ಹುಡುಕಾಟ ನಡೆಸುತ್ತಿದ್ದೇನೆ. ಹೀಗಾಗಿ ಮನೆಯ ನೆಲಮಹಡಿ ಕೊಠಡಿಯಲ್ಲಿ ಚಿನ್ನದ ಒಡವೆಗಳನ್ನು ಇಟ್ಟು ಪೂಜೆ ಮಾಡಿದರೆ ಒಳ್ಳೆಯದಾಗಲಿದೆ ಎಂದು ರೇಷ್ಮಾ ನಂಬಿಸಿದ್ದಳು.

ಫೆಬ್ರವರಿಯಲ್ಲಿ ನೆಲಮಹಡಿಯಲ್ಲಿ ಆಭರಣ ಇಟ್ಟು ಪೂಜೆ ಮಾಡಬೇಕೆಂದು ಪತಿಯ ಬಳಿ ಯೋಗಿಣಿ ಹೇಳಿದ್ದರು. ಇದನ್ನು ನಂಬಿದ ಮಾಲಕಿ, ಕೆಲಸದಾಕೆಯ ಸಲಹೆ ಮೇರೆಗೆ ತಮ್ಮ ಬಳಿಯಿದ್ದ ಆಭರಣ ಹಾಗೂ ಸಂಬಂಧಿಕರಿಂದ ಒಡವೆಗಳನ್ನು ಗಂಡನ ಮೂಲಕ ತರಿಸಿಕೊಂಡು ಪೂಜೆ ಮಾಡಿದ್ದರು. ಕೇವಲ ಪೂಜೆ ಮಾಡಬೇಕು. ಯಾವುದೇ ಕಾರಣಕ್ಕೂ ಮನೆಯ ಕಾಂಪೌಂಡ್‍ನಿಂದ ಹೊರಗೆ ತೆಗೆದುಕೊಂಡು ಹೋಗಬಾರದು ಉದ್ಯಮಿ ಷರತ್ತು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸದಾಕೆ ನಾಪತ್ತೆ: ಇತ್ತೀಚೆಗೆ ಜಯಂತ್ ಪತ್ನಿಯ ಬಳಿ ಆಭರಣ ಎಲ್ಲಿ ಎಂದು ಕೇಳಿದಾಗ ಪೂಜೆ ನಡೆಯುತ್ತಿದ್ದು, ನೆಲೆ ಮಹಡಿಯ ಕೊಠಡಿಯಲ್ಲಿ ಸುರಕ್ಷಿತವಾಗಿ ಇಟ್ಟಿರುವುದಾಗಿ ಹೇಳಿದ್ದಳು. ಒಡವೆ ಬಗ್ಗೆ ಪದೇ ಪದೆ ಕೇಳಿದಾಗ ಮಹಾವತಾರ ಬಾಬಾ ಕಥೆಯನ್ನು ಹೇಳುತ್ತಿದ್ದರು. ಆದರೆ ಮಾರ್ಚ್‍ನಿಂದ ಆಭರಣ ಪಡೆದು ಹೋಗಿದ್ದ ರೇಷ್ಮಾ ಅಂದಿನಿಂದ ಮನೆಗೆ ಕೆಲಸಕ್ಕೆ ಬಂದಿರಲಿಲ್ಲ.

ಕೋಟ್ಯಾಂತರ  ರೂ. ಮೌಲ್ಯದ ಚಿನ್ನ, ಡೈಮಂಡ್ ಆಭರಣ ಕೊಡಲು 15 ಲಕ್ಷ ರೂ.ಗೆ ವಂಚಕಿ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

cheat Home maid ಹಣ ಮನೆಕೆಲಸದಾಕೆ