ಕೃಷಿ ವಿಷಯ: ಖಾಸಗಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ?


09-07-2018 397

ಬೆಂಗಳೂರು: ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಕೃಷಿ ಕೋರ್ಸ್‍ಗಳನ್ನು ನಿರ್ಬಂಧಿಸಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ವಿಧಾನಪರಿಷತ್‍ನಲ್ಲಿಂದು ತಿಳಿಸಿದರು.

ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವರ ಗಮನಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಸಗಿ ವಿವಿಗಳು ಕೃಷಿಗೆ ಸಂಬಂಧಿಸಿದ ಬೋಧನೆ ಮಾಡದಂತೆ ಕಾಯ್ದೆಗೆ ತಿದ್ದುಪಡಿ ಮಾಡಿ ಹೊಸ ನಿಯಮಗಳನ್ನು ಜಾರಿ ಮಾಡಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಧಾರವಾಡ, ರಾಯಚೂರು, ಶಿವಮೊಗ್ಗ ಮತ್ತು ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಕೃಷಿ ಬೋಧನೆಗಳನ್ನು ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ. ಕಳೆದ  ಜೂ.12ರಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಸಗಿ ವಿವಿಗಳು ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ಬೋಧನೆ ಮಾಡಬಹುದೆಂದು 2012ರಲ್ಲಿ ಈ ಸದನವೇ ಕಾಯ್ದೆ ರೂಪಿಸಿತ್ತು. ಈಗ ಏಕಾಏಕಿ ಬೋಧನೆ ಮಾಡದಂತೆ ನಿರ್ಬಂಧ ಹಾಕಲು ಸಾಧ್ಯವಿಲ್ಲ ಎಂದರು.

ಈ ಖಾಸಗಿ ವಿವಿಗಳು ಕೇಂದ್ರ ಸರ್ಕಾರದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ವ್ಯಾಪ್ತಿಗೆ ಒಳಪಡುತ್ತವೆ. ಯಾವುದೇ ಹೊಸ ನಿಯಮ ರೂಪಿಸಬೇಕಾದರೆ ಕಾಯ್ದೆಗೆ ತಿದ್ದುಪಡಿ ಮಾಡುವುದು ಅನಿವಾರ್ಯ. ಈಗಾಗಲೇ ಕೆಲವು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಸರ್ಕಾರ ಈ ವಿಷಯದಲ್ಲಿ ಚರ್ಚೆಗೂ ಸಿದ್ದವಿದೆ. ಸದಸ್ಯರು ನೀಡುವ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಮಾತನಾಡಿ, 2012ರಲ್ಲಿ ಈ ಸದನವೇ 24 ವಿವಿಗಳನ್ನು ಸ್ಥಾಪಿಸಲು ಅನುಮತಿ ನೀಡಿದೆ. ಖಾಸಗಿ ವಿವಿಯಲ್ಲಿ ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ಬೋಧನೆ ಮಾಡದಂತೆ ನಿರ್ಬಂಧ ಹಾಕಬೇಕೆಂದು ಭಾರತೀಯ ಕೃಷಿ ಅನುಸಂದಾನ ಪರಿಷತ್‍ಗೆ ಪತ್ರ ಬರೆಯಲಾಗಿದೆ. ಕಳೆದ ಮೂರು ವರ್ಷಗಳಿಂದ ನಾವು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ಏಕಾಏಕಿ ಕಾನೂನು ಕ್ರಮ ಕೈಗೊಂಡರೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿರುತ್ತದೆ. ಈ ಎಲ್ಲಾ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಂಡೇ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಸರ್ಕಾರ ಅವರ ಬೆಂಬಲಕ್ಕೆ ನಿಲ್ಲಲಿದೆ ಎಂದು ಕೃಷ್ಣಬೈರೇಗೌಡರು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಸದಸ್ಯ ಎನ್.ರವಿಕುಮಾರ್ ವಿಷಯ ಪ್ರಸ್ತಾಪಿಸಿ, ದೊಡ್ಡಬಳ್ಳಾಪುರದ ರೈಟೆಕ್ನಾಲಜಿ ವಿವಿ, ಕಲಬುರ್ಗಿಯ ಸಿಂಗಾನಿಯ ಕೃಷಿ ಕಾಲೇಜು ಕೃಷಿಗೆ ಸಂಬಂಧಿಸಿದ ಬೋಧನೆ ಮಾಡುತ್ತಿದೆ. ಸರ್ಕಾರ ಇದಕ್ಕೆ ನಿರ್ಬಂಧ ಹಾಕಬೇಕೆಂದು ಒತ್ತಾಯಿಸಿದರು. ಸದಸ್ಯರಾದ ತೇಜಸ್ವಿನಿ ರಮೇಶ್‍ಗೌಡ, ವಿ.ಎಸ್.ಉಗ್ರಪ್ಪ, ಸಿ.ಎಂ.ಇಬ್ರಾಹಿಂ ಸೇರಿದಂತೆ ಮತ್ತಿತರರು ಮಾತನಾಡಿ, ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಮನವಿ ಮಾಡಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.N shivashankar red agriculture ನಿರ್ಬಂಧ ಕಾಯ್ದೆ