ರೈತರ ಸಂಪೂರ್ಣ ಸಾಲಮನ್ನಾ ಮಾಡಿ: ರೈತರ ಆಗ್ರಹ


09-07-2018 377

ಬೆಂಗಳೂರು: ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಮಾತು ಕೊಟ್ಟು ಕೇವಲ 2 ಲಕ್ಷವರೆಗಿನ ಸುಸ್ತಿ ಸಾಲಮನ್ನಾ ಮಾಡುವ ಮೂಲಕ ಕೊಟ್ಟ ಮಾತನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಪ್ಪಿ ನಡೆದಿದ್ದಾರೆ ಎಂದು ಆರೋಪಿಸಿ ಸಾವಿರಾರು ರೈತರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಸೇರಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರರು ರೈತರು ಫ್ರೀಡಂ ಪಾರ್ಕ್‍ವರಗೆ ಮೆರವಣಿಗೆ ನಡೆಸಿ ಕೂಡಲೇ ರಾಜ್ಯ ಸರ್ಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ಚುನಾವಣಾ ಪೂರ್ವದಲ್ಲಿ ನೀಡಿದ್ದ ಮಾತನ್ನು ಮುಖ್ಯಮಂತ್ರಿ ಆದ ಬಳಿಕ ಕುಮಾರಸ್ವಾಮಿ ತಪ್ಪಿದ್ದಾರೆ. 53 ಸಾವಿರ ಕೋಟಿ ಸಾಲಮನ್ನಾ ಮಾಡುವುದಾಗಿ ಹೇಳಿ ಹಿಂದೆ ಸರಿದಿರುವುದು ಏಕೆ ಎಂದು ಪ್ರಶ್ನಿಸಿದರು.

ರೈತ ಮುಖಂಡ ನಾಗೇಂದ್ರ ಮಾತನಾಡಿ, ರೈತರ ಸಾಲ ಮನ್ನಾ ಮಾಡುವ ಬದಲಾಗಿ ಹಿಂದೆ ಸರಿದಿರುವ ಕಾರಣ ರೈತರ ಆತ್ಮಹತ್ಯೆ ಶುರುವಾಗಿದೆ. ಸಾಲ ಮಿತಿಯನ್ನು 2009ರ ಏ. 1ರಿಂದ 2017ರ ನ.31ರವರೆಗೆ ನಿಗದಿಪಡಿಸಿರುವುದು ಇದಕ್ಕೆ ಕಾರಣ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಚಿಕ್ಕಸ್ವಾಮಿ, ವಿಜಯಪುರ ಜಿಲ್ಲೆಯ ಸಂಗಣ್ಣ ಸಂಗಬಸಪ್ಪ ಕಪನೂರ ಹಾಗೂ ಬಾಗಲಕೋಟೆ ಜಿಲ್ಲೆಯ ರಾಮಪ್ಪ ಅಂಬಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಸಾಲ ಅವಧಿಯ ಮಿತಿಯನ್ನು 2018ರ ಮೇ 31ರವರೆಗೆ ವಿಸ್ತರಿಸಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮನೆಗಳಿಗೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೇ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಕೈಬಿಡಬೇಕು. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ಜೊತೆಗೆ ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

 


ಒಂದು ಕಮೆಂಟನ್ನು ಬಿಡಿ