ಹಿರಿಯ ಅಧಿಕಾರಿಗಳ ಕಿರುಕುಳ: ಡಿಜಿಪಿಗೆ ಡಿವೈಎಸ್‌ಪಿ ಪತ್ರ


07-07-2018 392

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿನ ಕಿರುಕುಳದಿಂದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಎರಡು ವರ್ಷಗಳ ನಂತರ ಮತ್ತೊಬ್ಬ ಅಧಿಕಾರಿ ಇಲಾಖೆಯಲ್ಲಿನ ಕಿರುಕುಳದ ಬಗ್ಗೆ ದ್ವನಿ ಎತ್ತಿದ್ದು, ಡಿಜಿ ಮತ್ತು ಐಜಿಪಿಗೆ ಪತ್ರ ಬರೆದಿದ್ದಾರೆ.‌

ಮಡಿಕೇರಿಯಲ್ಲಿ ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ 2 ವರ್ಷವಾಗಿದೆ‌. ಗಣಪತಿ ಪೊಲೀಸ್ ಇಲಾಖೆಯಲ್ಲಿನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡರು ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಮತ್ತೊಬ್ಬ ಹಿರಿಯ ಅಧಿಕಾರಿ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳದ ಬಗ್ಗೆ ಡಿಜಿ ಮತ್ತು ಐಜಿಪಿಗೆ ಪತ್ರ ಬರೆದಿದ್ದಾರೆ.

ಮೇಲಧಿಕಾರಿಗಳಿಂದ ಆಗುತ್ತಿರುವ ಕಿರುಕುಳಕ್ಕೆ ಪರಿಹಾರ ಕೋರಿ 2017ರ ಡಿಸೆಂಬರ್‌ನಿಂದ ಈವರೆಗೆ ನಾಲ್ಕು ಪತ್ರ ರವಾನೆ ಮಾಡಲಾಗಿದ್ದು, ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಜೂನ್ 18ರಂದು ನೇರವಾಗಿ ಡಿಜಿ ನೀಲಮಣಿ ಎನ್.ರಾಜು ಅವರಿಗೆ ಪತ್ರ ಬರೆದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳದ ಬಗ್ಗೆ ಮಾತುಕತೆ ನಡೆಸಲು ಡಿವೈಎಸ್ಪಿ ಭೇಟಿಗೆ ಅವಕಾಶ ಕೇಳಿದ್ದಾರೆ.

ಡಿವೈಎಸ್‌ಪಿ ಮಗಳಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಮಗಳನ್ನು ತರಬೇತಿ ಕ್ಯಾಂಪ್‌ಗೆ ಬಿಟ್ಟು ಬರಲು 1ದಿನದ ರಜೆಗೆ ಅಧಿಕಾರಿ ಅರ್ಜಿ ಹಾಕಿದ್ದರು. 9 ದಿನಗಳ ಮುನ್ನವೇ ರಜೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು, ರಜೆ ದೊರಕದ ಹಿನ್ನೆಲೆಯಲ್ಲಿ ಮೌಖಿಕವಾಗಿ ತಿಳಿಸಿ ಡಿವೈಎಸ್ಪಿ ರಜೆ ತೆಗೆದುಕೊಂಡಿದ್ದರು. ಇದನ್ನು ಅಶಿಸ್ತು ಎಂದು ಪರಿಗಣಿಸಿ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. 23 ದಿನಗಳ ತರಬೇತಿಯಲ್ಲಿ ಕೇವಲ 1ದಿನ ಮಾತ್ರ ರಜೆ ಹಾಕಿದ್ದೆ. ಆದರೆ, ಮತ್ತೊಬ್ಬ ಅಧಿಕಾರಿ ಅರ್ಜಿ ಸಹ ನೀಡದೆ ರಜೆ ಮೇಲೆ ಹೋಗಿದ್ದರು. ಹಿರಿಯ ಅಧಿಕಾರಿ ವೈಯಕ್ತಿಕ ಕೆಲಸಕ್ಕೆ ಅವರು ಹೋಗಿದ್ದರು. ಇನ್ನೂ ಕೆಲವರಿಗೆ 3-4 ದಿನ ಹೊರಗಡೆ ಹೋಗಲು ಅನುಮತಿ ನೀಡಲಾಗಿತ್ತು ಎಂದು ಇಲಾಖೆಯ ತಾರತಮ್ಯ ನೀತಿಯನ್ನು ಡಿವೈಎಸ್ಪಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

DYSP Police ತರಬೇತಿ ಕಿರುಕುಳ