ಪರಿಷತ್ ಕಲಾಪ: ಆಡಳಿತ-ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ


03-07-2018 557

ಬೆಂಗಳೂರು: ಪ್ರಸ್ತುತ ಕಲಾಪದಲ್ಲಿ ಪ್ರಶ್ನೋತ್ತರಕ್ಕೆ ಅವಕಾಶ ನೀಡಿಲ್ಲ ಎಂದು ವಿಧಾನ ಪರಿಷತ್‍ನಲ್ಲಿ ಪ್ರತಿಪಕ್ಷ ಬಿಜೆಪಿಯ ಅರುಣ್ ಶಾಪೂರ್, ರಘುನಾಥ್ ಮಲ್ಕಾಪುರೆ ಆಕ್ಷೇಪ ವ್ಯಕ್ತಪಡಿಸಿ ಹಕ್ಕು ಚ್ಯುತಿ ಮಂಡಿಸುತ್ತೇವೆ ಎಂದು ಹೇಳಿದ ವಿಷಯ ಸದನದಲ್ಲಿ ಪ್ರತಿಧ್ವನಿಸಿ ಆಡಳಿತ-ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿ ಕೆಲಕಾಲ ಗದ್ದಲ ಕೋಲಾಹಲ ಸೃಷ್ಟಿಸಿತು.

ಕಲಾಪ ಆರಂಭದಲ್ಲಿ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ ಸದನದಲ್ಲಿ ಪ್ರಶ್ನೋತ್ತರಕ್ಕೆ ಅವಕಾಶ ನೀಡದಿರುವುದು ಹಕ್ಕುಚ್ಯುತಿ ಆಗಿದೆ. ಈ ಬಗ್ಗೆ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಬೇಕು ಎಂದರು. ಈ ಬಗ್ಗೆ ಟೀಕೆ ಮಾಡೋಣವೆಂದರೆ ಸರ್ಕಾರ ಇನ್ನು ಟೇಕಾಫ್ ಆಗಿಲ್ಲ ಎಂದು ಹೇಳಿದಾಗ ತೀವ್ರ ಆಕ್ರೋಶಗೊಂಡ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ, ಟೀಕಿಸುವುದಿಲ್ಲ ಎಂದು ಹೇಳುತ್ತೀರಾ, ಆದರೆ ಟೇಕಾಫ್ ಆಗಿಲ್ಲ ಎಂದು ಟೀಕಿ ಮಾಡುತ್ತೀರಾ ಇದು ಎಷ್ಟು ಸಮಂಜಸ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ಮಾತನಾಡುವಾಗ ನನ್ನ ಅನುಮತಿ ಪಡೆಯಬೇಕು ಎಂದು ಭೋಜೇಗೌಡರಿಗೆ ಸಮಜಾಯಿಸಿ ನೀಡಿದರು. ಮಾತು ಮುಂದುವರೆಸಿದ ಮಲ್ಕಾಪುರೆ, ಆಡಳಿತ ಪಕ್ಷದ ಕಾರ್ಯವೈಖರಿ ನೋಡಿದರೆ ಪ್ರತಿಪಕ್ಷದವರಿಗೆ ಮಾತನಾಡಲು ಬಿಡುವುದಿಲ್ಲವೆಂದು ಅನಿಸುತ್ತಿದೆ ಎಂದು ಟೀಕಿಸಿದರು.

ಪ್ರಶ್ನೋತ್ತರ ಇಲ್ಲ ಎಂದರೆ ಸದನದ ಸದಸ್ಯರ ಹಕ್ಕುಚ್ಯುತಿ ಆಗುವುದಿಲ್ಲವೇ, ಹಕ್ಕುಚ್ಯುತಿ ಮಂಡಿಸಲು ಅವಕಾಶ ಕೊಡಬೇಕು ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಇದಕ್ಕೆ ಬೆಂಬಲಿಸಿದ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಸಭಾಧ್ಯಕ್ಷರಾದ ರಮೇಶ್‍ ಕುಮಾರ್ ಅವರು ಹೇಳಿರುವಂತೆ ರಾಜ್ಯದ 6 ಕೋಟಿ ಜನರೆಲ್ಲರೂ ಸರ್ಕಾರದ ಮುಂದೆ ಅಹವಾಲು ಸಲ್ಲಿಸಲು ಸಾಧ್ಯವಿಲ್ಲ. ಅವರ ಪ್ರತಿನಿಧಿಯಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಪ್ರಶ್ನೆಗಳನ್ನು ಕೇಳಬೇಕೆಂದು ಹೇಳಿದ್ದಾರೆ.

ಅದರಂತೆ ನಾವು ಇಲ್ಲಿ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಆದರೆ ಇಲ್ಲಿ ಅವಕಾಶವನ್ನೇ ನೀಡಿಲ್ಲ. ಶಾಸನದ ಆಧಾರದ ಮೇಲೆ ನಡೆಯಬೇಕಾಗಿರುವ ಕ್ರಮವನ್ನು ಮೊಟಕುಗೊಳಿಸಬೇಕಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಸಮಜಾಯಿಸಿ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ, ಹತ್ತು ದಿನಗಳ ಮುಂಚೆ ಸರ್ಕಾರದಿಂದ ನೋಟಿಸ್ ಬಂದಿರಬೇಕು. 26ಕ್ಕೆ ನಮಗೆ ನೋಟಿಸ್ ಬಂದಿದೆ. ಅನಿವಾರ್ಯ ಪ್ರಸಂಗದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಈ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುತ್ತೀನಿ ಎಂದು ಹೇಳಿದರು. ಸಚಿವ ಯು.ಟಿ.ಖಾದರ್ ಮಾತನಾಡಿ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸುವ ಸಂದರ್ಭದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆಯೂ ಕೂಡ ಚರ್ಚಿಸಬಹುದು ಎಂದು ಅವರು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Vidhan Parishad governor ಯು.ಟಿ.ಖಾದರ್ ಅಹವಾಲು