ಸಂಕಷ್ಟದಲ್ಲಿ ಯಾತ್ರಾರ್ಥಿಗಳು: ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ


03-07-2018 654

ನವದೆಹಲಿ: ಭಾರೀ ಮಳೆಯಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಸಿಲುಕಿದ್ದ 1500 ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ನೇಪಾಳ ಮತ್ತು ಟಿಬೆಟ್ ನಡುವೆ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾರತೀಯ ಯಾತ್ರಿಗಳು ಸಿಕ್ಕಿಹಾಕಿಕೊಂಡಿದ್ದಾರೆ.

ಕರ್ನಾಟಕದ ವಿವಿಧ ಭಾಗಗಳಿಂದ ತೆರಳಿದ್ದ ಸುಮಾರು 200ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸರಕ್ಷಿತವಾಗಿದ್ದು, ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವಿಶ್ವೇಶ್ವರಹೆಗಡೆ ಕಾಗೇರಿ ಪ್ರಸ್ತಾಪಿಸಿ, ಕನ್ನಡಿಗರನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್.ವಿ.ದೇಶಪಾಂಡೆ, ಈಗಾಗಲೇ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ರಕ್ಷಣೆ ಮಾಡುವುದಕ್ಕೆ ಮನವಿ ಮಾಡಿದ್ದೇವೆ. ರಾಜ್ಯದಿಂದ ತೆರಳಿರುವ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಯಾರಿಗೂ  ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.

ಸಂಕಷ್ಟದಲ್ಲಿ ಭಾರತೀಯರು: ನೇಪಾಳ ಹಾಗೂ ಟಿಬೆಟ್‍ ನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸುಮಾರು 1500 ಭಾರತೀಯರು ಸ್ವದೇಶಕ್ಕೆ ಹಿಂದಿರುಗಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಸಿಮಿಕೋಟ್‍ನಲ್ಲಿ 525, ಹಿಲ್ಸಾದಲ್ಲಿ 550 ಹಾಗೂ ಟಿಬೆಟ್‍ನಲ್ಲಿ 500 ಮಂದಿ ಭಾರತೀಯರು ಸಿಲುಕಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಪ್ರವಾಸಿಗರನ್ನು ನೇಪಾಳದ ರಾಜಧಾನಿ ಕಠ್ಮಂಡುವಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ರಸ್ತೆಗಳು ಕಿರಿದಾಗಿರುವುದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗದಷ್ಟು ಜಲಪ್ರಳಯವಾಗಿದೆ.

ಸಣ್ಣ ಸಣ್ಣ ವಿಮಾನಗಳು ಮತ್ತು ಹೆಲಿಕಾಫ್ಟರ್ ಮೂಲಕ ಪ್ರಯಾಣಿಕರನ್ನು ಸಾಗಿಸಬಹುದು. ಈಗಾಗಲೇ ನಾವು ನೇಪಾಳ ಸರ್ಕಾರಕ್ಕೆ ಭಾರತೀಯರನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿರುವ ಅಲ್ಲಿನ ಸರ್ಕಾರ ಪ್ರವಾಸಿಗರಿಗೆ ಬೇಕಾದ ನೀರು, ಆಹಾರ, ಔಷಧಿ, ಹೊದಿಕೆಗಳು ಸೇರಿದಂತೆ ಮತ್ತಿತರ ಅಗತ್ಯವಸ್ತುಗಳನ್ನು ಪೂರೈಕೆ ಮಾಡಿದ್ದಾರೆ. ಇದಕ್ಕಾಗಿ ನಾವು ಅಲ್ಲಿನ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಹವಾಮಾನ ವೈಪರಿತ್ಯದಿಂದಾಗಿ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಆದರೂ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಸಂಬಂಧಿಕರು ಭಯಪಡುವ ಅಗತ್ಯವಿಲ್ಲ ಎಂದು ಸುಷ್ಮಾಸ್ವರಾಜ್ ಅಭಯ ಹಸ್ತ ನೀಡಿದ್ದಾರೆ. ಪ್ರವಾಸಿಗರಿಗೆ ತೊಂದರೆಯಾಗದಂತೆ ಅಲ್ಲಿನ ಸರ್ಕಾರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸುರಕ್ಷಿತವಾಗಿ ಎಲ್ಲರೂ ತಾಯ್ನಾಡಿಗೆ ಬರಲಿದ್ದಾರೆ ಎಂದು ಹೇಳಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುಷ್ಮಾಸ್ವರಾಜ್ ಮೂಲಕ ದೂರವಾಣಿ ಮೂಲಕ ಮಾತನಾಡಿ ಕನ್ನಡಿಗರನ್ನು ರಕ್ಷಣೆ ಮಾಡುವಂತೆ ಕೋರಿದ್ದಾರೆ. ಅಲ್ಲದೆ, ದೆಹಲಿ ಕರ್ನಾಟಕ ಭವನದಲ್ಲಿರುವ ಸ್ಥಾನಿಕ ಆಯುಕ್ತರಿಗೂ ಪ್ರಯಾಣಿಕರ ಬಗ್ಗೆ ಪ್ರತಿ ಗಂಟೆ ಗಂಟೆಗೂ ಮಾಹಿತಿ ಪಡೆಯಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರು, ಧಾರವಾಡ, ಗುಲ್ಬರ್ಗ ಮತ್ತು ಹಾಸನದ ಪ್ರವಾಸಿಗರು ಅಮರನಾಥ, ಕೈಲಾಸ, ಮಾನಸ ಸರೋವರ ಪ್ರವಾಸ ಕೈಗೊಂಡಿದ್ದರು. ಇನ್ನು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಭಾರತ, ನೇಪಾಳ ಮತ್ತು ಟಿಬೆಟ್ ರಾಯಭಾರಿ ಕಚೇರಿ ಅಧಿಕಾರಿಗಳು ನೆರವಿಗೆ ಬಂದಿದ್ದಾರೆ. ಯಾತ್ರಾರ್ಥಿಗಳೆಲ್ಲ ಸುರಕ್ಷಿತವಾಗಿದ್ದು, ಸಂಪರ್ಕದಲ್ಲಿದ್ದಾರೆ ಎಂದು ಯಾತ್ರಾರ್ಥಿಗಳ ಬಗ್ಗೆ ಕಂದಾಯ ಇಲಾಖೆ ತುರ್ತು ಕಾರ್ಯಾಚರಣೆ ಕುರಿತು ಕೇಂದ್ರ ಟ್ವಿಟ್ ಮಾಡಿದೆ.

ಮಾನಸ ಸರೋವರ ಯಾತ್ರೆಯಲ್ಲಿ ಕರ್ನಾಟಕದ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದರಿಂದ ರಾಜ್ಯ ಸರ್ಕಾರ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೆರವನ್ನು ಕೋರಿತ್ತು. ದೆಹಲಿಯಲ್ಲಿರುವ ಸ್ಥಾನಿಕ ನಿರ್ದೇಶಕರಿಗೆ ಅಗತ್ಯ ಪರಿಹಾರ ಕ್ರಮಕೈಗೊಳ್ಳುವಂತೆ ಸಿಎಂ ಕುಮಾರಸ್ವಾಮಿ ಅವರು ಸಹ ಸೂಚಿಸಿದ್ದಾರೆ.

ಈಗಾಗಲೇ ಪ್ರವಾಸಿಗರ ರಕ್ಷಣೆಗೆ ಮುಂದಾಗಿರುವ ಕರ್ನಾಟಕ ಸರ್ಕಾರ, ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿದೆ. ಅಲ್ಲದೇ ಕೆಲವರೊಂದಿಗೆ ಸಂಪರ್ಕ ಸಾಧಿಸಿ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ ಎನ್ನಲಾಗಿದೆ. ನೀರು, ಆಹಾರ ಮತ್ತು ಸಂಚಾರದ ವ್ಯವಸ್ಥೆ ಮಾಡುತ್ತಿರುವ ಅಧಿಕಾರಿಗಳು, ಬೇರೆ ಮಾರ್ಗದಿಂದ ಪ್ರವಾಸಿಗರನ್ನು ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ. ಹೆಲಿಕಾಪ್ಟರ್ ಗಳನ್ನು ಬಳಸಿ ಸುರಕ್ಷಿತ ಜಾಗಕ್ಕೆ ಕರೆತರುವ ಪ್ರಯತ್ನವೂ ನಡೆಯುತ್ತಿದೆ.

ಮಾನಸ ಸರೋವರ ಯಾತ್ರೆಯ ಹಾದಿಯಲ್ಲಿ ನೇಪಾಳದ ಸಿಮಿಕೋಟ್ ಎಂಬಲ್ಲಿ ಭಾರಿ ಮಳೆ ಮತ್ತು ಮಂಜಿನಿಂದಾಗಿ ಯಾತ್ರಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಿಂದ ರಾಜ್ಯದ ಯಾತ್ರಿಗಳೊಂದಿಗೆ ಸಂಪರ್ಕವನ್ನೂ ಕಡಿದುಕೊಂಡಿದ್ದರು. ಕರ್ನಾಟಕದ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿಯೇ ಇದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಹೇಳಿದ್ದಾರೆ.

ಸಹಾಯವಾಣಿ: ಇನ್ನು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಪ್ರಯಾಣಿಕರ ಮಾಹಿತಿಗಾಗಿ ಐದು ಭಾಷೆಗಳಲ್ಲಿ ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ತಮಿಳು, ತೆಲಗು, ಕನ್ನಡ ಹಾಗೂ ಮಲೆಯಾಳಿಯಂಗಳಲ್ಲಿ ಸಹಾಯವಾಣಿ ಇದ್ದು, ಸಂಬಂಧಪಟ್ಟವರು ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಪ್ರಣವ್‍ಗಣೇಶ್: +977-9851107006, ತಾಶಿಕಂಪ: +977-98511550077, ತರುಣ್‍ರಹೇಜ್: +977 9851107021, ರಾಜೇಶ್ ಜಾ: +977-9818832398, ಯೋಗಾನಂದನ್: +977-9823672371 (ಕನ್ನಡ) ಪಿಂಡಿನರೇಶ್: +977-9808082292 (ತೆಲುಗು), ಆರ್.ಮುರುಗನ್: +977-98085006(ತಮಿಳು), ರಂಜಿತ್: +977-9808500644(ಮಲೆಯಾಳಂ).


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Manasarovar Pilgrims ಮಾನಸ ಸರೋವರ ಸಹಾಯವಾಣಿ