ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಕಳ್ಳತನ


03-07-2018 477

ಬೆಂಗಳೂರು: ಒಎಲ್‍ಎಕ್ಸ್ ಜಾಹೀರಾತಿನಲ್ಲಿ ನೋಡಿದ್ದ ಬೈಕ್ ಮಾಲೀಕರಿಗೆ ಬೈಕ್ ಖರೀದಿಸುವುದಾಗಿ ನಂಬಿಸಿ ವಾಹನದ ಸ್ಥಿತಿಗತಿ ನೋಡಿಕೊಂಡು ಬರುವುದಾಗಿ ಟೆಸ್ಟ್ ಡ್ರೈವ್‍ಗೆ ಹೋಗಿ ಬೈಕನ್ನೇ ಕದ್ದ ಖದೀಮನೊಬ್ಬ ಯಲಹಂಕ ಪೊಲೀಸರ ಅತಿಥಿಯಾಗಿದ್ದಾನೆ.

ಕೆಂಗೇರಿ ಉಪನಗರದ ಶಾಂತಿನಿವಾಸ್ ಲೇಔಟ್‍ನ ಭರತ್ (27) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಎರಡೂವರೆ ಲಕ್ಷ ಮೌಲ್ಯದ 3 ಬೈಕ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಭಟ್ಟರ ಮಾರೇನಹಳ್ಳಿಯ ಪ್ರೀತಂ ಅವರು ತಮ್ಮ ಬಜಾಜ್ ಪಲ್ಸರ್ ಬೈಕ್‍ನ್ನು ಮಾರಾಟ ಮಾಡುವುದಾಗಿ ಜಾಹೀರಾತು ಹಾಕಿದ್ದರು. ಅದನ್ನು ನೋಡಿದ ಆರೋಪಿ ಕಳೆದ ಜೂ.13 ರಂದು ಪ್ರೀತಂ ಅವರಿಗೆ ಬೈಕ್ ಖರೀದಿಸುವುದಾಗಿ ಯಲಹಂಕ ಸರ್ಕಾರಿ ಆಸ್ಪತ್ರೆ ಬಳಿ ಕರೆಸಿಕೊಂಡಿದ್ದಾನೆ.

ಬೈಕ್‍ನ್ನು 45,500 ರೂ.ಗಳಗೆ ಖರೀದಿಸುವುದಾಗಿ ನಂಬಿಸಿದ ಆರೋಪಿ, ಬೈಕ್‍ನ ಸ್ಥಿತಿಗತಿ ನೋಡಿಕೊಂಡು ಬರುವುದಾಗಿ ಟೆಸ್ಟ್ ರೈಡ್‍ಗೆ ಹೋದ ನಂತರ ವಾಪಸ್ಸು ಬರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಬೆಳಿಗ್ಗೆಯಿಂದ ಸಂಜೆವರೆಗೆ ಕಾದ ಪ್ರೀತಂ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಯು ಒಎಲ್‍ಎಕ್ಸ್ ನಲ್ಲಿ ಜಾಹೀರಾತು ನೀಡಿದವರ ಬೈಕ್‍ಗಳನ್ನು ಖರೀದಿಸುವುದಾಗಿ ನಂಬಿಸಿ ಟೆಸ್ಟ್ ರೈಡ್‍ಗೆ ಹೋಗಿ ಕಳವು ಮಾಡುತ್ತಿದ್ದನ್ನು ಒಪ್ಪಿಕೊಂಡಿದ್ದಾನೆ.

ಇಲ್ಲಿಯವರೆಗೆ 3 ಇಂತಹ ಕೃತ್ಯಗಳನ್ನು ಒಪ್ಪಿಕೊಂಡಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

OLX Test ride ಜಾಹೀರಾತು ಮಾಲೀಕ