ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ: ಜಿಟಿಡಿ ವಿಷಾದ


29-06-2018 386

ಬೆಂಗಳೂರು: ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗುತ್ತಿಲ್ಲವಾದ್ದರಿಂದ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಇಷ್ಟೊಂದು ವಿಜ್ಞಾನ, ತಂತ್ರಜ್ಞಾನ ಇದೆ. ಆದರೂ, ನಮ್ಮ ದೇಶದಲ್ಲಿ ಶೇ.25ರಷ್ಟು ಜನ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಿದೆ. ನಾವೆಲ್ಲಾ ಉನ್ನತ ಶಿಕ್ಷಣ ಒದಗಿಸುವಲ್ಲಿ ವಿಫಲವಾಗಿದ್ದೇವೆ ಎಂದು ತಿಳಿಸಿದರು.

ನನಗೂ ಬೆಳಗಾವಿಗೂ ನಂಟಿದೆ. ವಿಟಿಯು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ. ನಾನು ಉನ್ನತ ಶಿಕ್ಷಣ ಸಚಿವನಾಗಿ ಅಧಿಕಾರ ಸ್ವೀಕರಿಸಿ ನಾಲ್ಕೈದು ದಿನವಾಗಿದೆ. ನಾನು ಸಹಕಾರ ಸಚಿವನಾಗಿದ್ದಾಗ ಬೆಳಗಾವಿಯಲ್ಲಿ ಸಹಕಾರಿ ಕಚೇರಿ ಕಟ್ಟಿಸಿದ್ದೇನೆ. ಹೀಗಾಗಿ ನನಗೂ ಬೆಳಗಾವಿಗೂ ನಂಟಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕಿದೆ. ಸರ್ಕಾರಿ ಕಾಲೇಜಿಗಿಂತ ಖಾಸಗಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರಿ ಕಾಲೇಜಿನ ಬೋಧಕರಿಗೆ ಹಚ್ಚಿನ ಸೌಲಭ್ಯವಿದೆ. ಆದರೂ ಯಾಕೆ ಉತ್ತಮ ಶಿಕ್ಷಣ ನೀಡಲಾಗುತ್ತಿಲ್ಲ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಪ್ರತಿಯೊಬ್ಬರು ಶಿಕ್ಷಣ ಕ್ಷೇತ್ರದಲ್ಲಿ ಸಿಕ್ಕಿರುವ ಗುರು ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬೇಕಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉನ್ನತ ಶಿಕ್ಷಣ ದೊರೆಯುವಂತೆ ಮಾಡಬೇಕಿದೆ ಎಂದು ಸಲಹೆ ನೀಡಿದರು. ಬಜೆಟ್ ಸಭೆಯಲ್ಲಿ ಪ್ರಾಂಶುಪಾಲ ಹಾಗೂ ಉಪನ್ಯಾಸಕರ ಹುದ್ದೆ ಭರ್ತಿ ಹಾಗೂ 7ನೇ ವೇತನ ಸ್ಕೇಲ್ ನೀಡಬೇಕೆಂದು ಸೂಚಿಸಿದ್ದೇನೆ ಎಂದು ತಿಳಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

G.T.Devegowda Higher education ಬಜೆಟ್ ಶಿಕ್ಷಣ