ಸೈಬರ್ ಕ್ರೈಂ ತಡೆಯಲು ಶ್ರಮಿಸಿ: ಪರಮೇಶ್ವರ್


27-06-2018 349

ಬೆಂಗಳೂರು: ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಮಾದರಿ ಇಲಾಖೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಗೌರವವನ್ನು ಹೀಗೆ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಗೃಹ ಸಚಿವರೂ ಆದ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಅವರು ಹೇಳಿದ್ದಾರೆ.

ಕೊಪ್ಪಳದ ಮುನಿರಾಬಾದ್ ಕೆಎಸ್ಆರ್‌ಪಿ ತರಬೇತಿ ಶಾಲೆಯಲ್ಲಿ ನಡೆದ ನಿರ್ಗಮನ ಪಥಸಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಶಿಸ್ತಿನಿಂದ, ಜವಾಬ್ದಾರಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳು ನಮ್ಮಲ್ಲಿದ್ದಾರೆ. ಕಳೆದ ಒಂಬತ್ತು ತಿಂಗಳಿನಿಂದ ತರಬೇತಿ ಪಡೆದುಕೊಂಡು ಕಾನ್ಸ್‌ ಟೇಬಲ್‌ಗಳಾಗಿ ಸೇವೆ ಸಲ್ಲಿಸಲು ಬರುತ್ತಿರುವ 305 ಪ್ರಶಿಕ್ಷಣಾರ್ಥಿಗಳು ಸಹ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟಾಗ ಇಡೀ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ. ಇದರಡಿ ಎಲ್ಲರಿಗೂ ಸಮಾನ ಹಕ್ಕು ನೀಡುವ ಕಾನೂನನ್ನು ಅವರು ನೀಡಿದ್ದಾರೆ.

ನಮ್ಮ ದೇಶದಲ್ಲಿ ಸಣ್ಣಸಣ್ಣ ಭಿನ್ನಾಭಿಪ್ರಾಯ, ಮೇಲು ಕೀಳು ಎಂಬ ಭಾವನೆ ಇರಬಹುದು. ಆದರೆ, ದೇಶ ಎಂದು ಬಂದಾಗ ಎಲ್ಲರೂ ಒಟ್ಟಾಗಿ ನಿಲ್ಲುವುದರಿಂದಲೇ ನಮ್ಮ ಪ್ರಜಾಪ್ರಭುತ್ವ ವಿಶ್ವದಲ್ಲೇ ಯಶಸ್ವಿಯಾಗಿದೆ. ಇತರೆ ರಾಷ್ಟ್ರಗಳಲ್ಲಿ ಸರಕಾರ ಬದಲಾಗುವ ಸಂದರ್ಭದಲ್ಲಿ ರಕ್ತಪಾತವೇ ಆಗುತ್ತದೆ. ಆದರೆ, ಭಾರತದಲ್ಲಿ ಚುನಾವಣೆ ನಡೆಯುವ ಮೂಲಕ ಶಾಂತಿಯುತವಾಗಿ ಹೊಸ ಸರಕಾರ ರಚನೆಯಾಗುತ್ತದೆ. ಹೀಗಾಗಿ ನಮ್ಮದು ಯಶಸ್ವಿ ಪ್ರಶಜಾಪ್ರಭುತ್ವ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚಿದಂತೆ ಸೈಬರ್ ಕ್ರೈಂ ನಂತಹ ಅಪರಾಧಗಳು ಏರಿಕೆಯಾಗುತ್ತಿವೆ. ಈ ಅನಾಹುತ ತಡೆಯಲು ನಿಮಗೆ ಅಡಿಪಾಯ ಹಾಕಿಕೊಟ್ಟಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪೊಲೀಸರೆಂದರೆ ಜನರಲ್ಲಿ ಭಯದ ವಾತಾವರಣವಿದೆ. ಇದನ್ನು ಜನರ ಮನಸ್ಸಿನಿಂದ ಹೋಗುವ ರೀತಿಯಲ್ಲಿ ಪೊಲೀಸರು ಜನಸ್ನೇಹಿಗಳಂತೆ ಕೆಲಸ ಮಾಡಬೇಕು ಎಂದರು. ಮುನಿರಾಬಾದ್ ಕೆಎಸ್ಆರ್‌ಪಿ ತರಬೇತಿ ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿ ವಸತಿ ನಿಲಯ ನಿರ್ಮಾಣ ಕೆಲಸ ನಡೆಯುತ್ತಿದೆ. ಹೆಚ್ಚಿನ ಕಟ್ಟಡಗಳ ಅವಶ್ಯಕತೆ ಕೂಡ ಇದೆ. ಈ ಎಲ್ಲ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ನಿರ್ದೇಶಕ ಭಾಸ್ಕರ್ ರಾವ್, ಶಾಸಕ ರಾಘವೇಂದ್ರ ಹಿತ್ನಾಳ್, ತರಬೇತಿ ಶಾಲೆ ಮುಖ್ಯಸ್ಥ ರಾಮಕೃಷ್ಣ ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

G. Parameshwarar KSRP ಜನಸ್ನೇಹಿ ಕಾರ್ಯಕ್ರಮ