ಕೆಪಿಸಿಸಿ ಅಧ್ಯಕ್ಷ ಗಾದಿಗೆ ಪೈಪೋಟಿ!


22-06-2018 583

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಹಪಾಹಪಿ-ತಿಕ್ಕಾಟ-ಅಸಮಾಧಾನ ಕಡಿಮೆಯಾಗುವ ಮೊದಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಹಗ್ಗಜಗ್ಗಾಟ ಆರಂಭವಾಗಿದೆ.

ಹಾಲಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಹೈಕಮಾಂಡ್ ಆದ್ಯತೆ ಎನ್ನಲಾಗುತ್ತಿಯಾದರೂ ರಾಜ್ಯ ಕಾಂಗ್ರೆಸ್ ನಾಯಕರು ವಯಸ್ಸಿನ ತಕರಾರು ತೆಗೆದಿದ್ದಾರೆ. ಪಕ್ಷದ ಸಂಸದರು ಸಭೆ ನಡೆಸಿ, ಹಿರಿಯರಿಗೆ ಅವಕಾಶ ಕೊಡಬೇಕು ಎಂಬ ಸಂದೇಶವನ್ನು ಹೈ ಕಮಾಂಡ್​ಗೆ ಕಳಿಸಿದ್ದಾರೆ. ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಬಿ.ಕೆ.ಹರಿಪ್ರಸಾದ್ ತೀವ್ರ ಲಾಬಿ ನಡೆಸಿದ್ದಾರೆ.

ಇದೇ ವೇಳೆ ಉತ್ತರ ಕರ್ನಾಟಕಕ್ಕೆ ಅವಕಾಶ ಸಿಗಬೇಕೆಂಬ ಹೊಸ ಕೂಗೆದ್ದಿದೆ.  ಎಸ್.ಆರ್.ಪಾಟೀಲ್ ಆಕಾಂಕ್ಷಿ ಯಾಗಿದ್ದಾರೆ.

‘ನಾನು ಹೈಕಮಾಂಡ್ ಜೊತೆ ಅಧ್ಯಕ್ಷ ಸ್ಥಾನದ ಬಗ್ಗೆ ರ್ಚಚಿಸಿಲ್ಲ. ಸಮರ್ಥರನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ. ನಾನು ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಕೆಲಸ ನಿರ್ವಹಿಸಿಲ್ಲವೇ? ಶಾಸಕ, ಸಚಿವನಾಗಿ ಕೆಲಸ ಮಾಡಿ ತೋರಿಸಿದ್ದೇನೆ’ ಎನ್ನುವ ಮೂಲಕ ಕಿರಿಯ ಎಂಬ ಹಿರಿಯರ ಟೀಕೆಗೆ ದಿನೇಶ್ ಗುಂಡೂರಾವ್ ಎದಿರೇಟು ನೀಡಿದ್ದಾರೆ. ಯಾರನ್ನು ಕೆಪಿಸಿಸಿ ಗಾದಿಯಲ್ಲಿ ಕೂರಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದು, ಸಚಿವ ಸ್ಥಾನ ಕೈ ತಪ್ಪಿದ ಸತೀಶ್ ಜಾರಕಿಹೊಳಿ ಅವರಿಗೂ ಅವಕಾಶ ನೀಡಿತ್ತು. ಆದರೆ ಅವರು ಅದನ್ನು ಒಪ್ಪಿಲ್ಲ.

‘ಯಾವಾಗಲೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆಗುತ್ತಲೇ ಇದೆ. ಈ ಭಾಗದಲ್ಲಿ ಶೇ.80 ಶಾಸಕರು ಚುನಾಯಿತರಾಗಿದ್ದರೆ, ದಕ್ಷಿಣದಲ್ಲಿ ಶೇ.20 ಚುನಾಯಿತರಾಗಿರುತ್ತಾರೆ. ಇಂಥ ಸಂದರ್ಭದಲ್ಲೂ ಉತ್ತರ ಕರ್ನಾಟಕಕ್ಕೆ ಪ್ರಮುಖ ಸ್ಥಾನಮಾನ ಸಿಗುವುದಿಲ್ಲ. ಕೇವಲ ದಕ್ಷಿಣ ಭಾಗಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈಗಲೂ ಹಾಗೇ ಆಗಿದೆ’ ಎಂದು ಸತೀಶ್ ಜಾರಕಿಹೊಳಿ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಮೂಲಗಳ ಪ್ರಕಾರ ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷರನ್ನಾಗಿಸಿ, ಈಶ್ವರ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷ ಆಗಿಸುವ ಚಿಂತನೆ ಪಕ್ಷದಲ್ಲಿದೆ ಎಂದು ತಿಳಿದುಬಂದಿದೆ.

ಹಿಂದುಳಿದ ಜಾತಿಯ ಮುಖಂಡರಿಗೆ ಆದ್ಯತೆ ನೀಡುವುದಾದರೆ ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಬಿ.ಕೆ.ಹರಿಪ್ರಸಾದ್ ಹಾಗೂ ಈವರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಡಗೈ ಜನಾಂಗದವರಿಗೆ ನೀಡುವಂತೆ ಕೆ.ಎಚ್.ಮುನಿಯಪ್ಪ ಪಟ್ಟು ಹಿಡಿದ್ದಿದ್ದಾರೆ.


ಒಂದು ಕಮೆಂಟನ್ನು ಬಿಡಿ