ದೇವೇಗೌಡರಿಂದ ಫಿಟ್ನೆಸ್ ಚಾಲೆಂಜ್ ಗೆ ಉತ್ತರ


21-06-2018 459

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫಿಟ್ನೆಸ್ ಚಾಲೆಂಜ್ ಹಾಕಿದ್ದೆ ಹಾಕಿದ್ದು, ಎಲ್ಲಿ ನೋಡಿದರೂ ಯೋಗ ದಿನದ್ದೆ ಮಾತು. ‌ಇದೀಗ ಪ್ರಧಾನ ಮಂತ್ರಿಗಳ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿರುವ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಅವರು ಮೊದಲ ಬಾರಿಗೆ ಬಹಿರಂಗವಾಗಿ ಯೋಗ ಮಾಡುವ ಮೂಲಕ ಪ್ರಧಾನಿ ಮೋದಿಯವರಿಗೆ ಉತ್ತರ ನೀಡಿದ್ದಾರೆ.

ಯೋಗ ದಿನದ ಅಂಗವಾಗಿ ಪದ್ಮನಾಭ ನಗರದ ತಮ್ಮ ನಿವಾಸದಲ್ಲಿ ದೇವೇಗೌಡರು ಬಹಿರಂಗವಾಗಿ ಯೋಗ ಪ್ರದರ್ಶಿಸಿದರು. ಇವರಿಗೆ ಯೋಗ ಗುರು ಕಾರ್ತಿಕ್ ಸಾಥ್ ನೀಡಿದರು. ಸರ್ವಾಂಗಾಸನ, ಹಲಾಸನ, ವೀರಾಸನ ಮುಂತಾದ ಕ್ಲಿಷ್ಟಕರ ಆಸನಗಳನ್ನು ಮಾಡುವ ಮೂಲಕ ಯುವ ಸಮೂದಾಯಕ್ಕೆ ಯೋಗದ ಮಹತ್ವ ಸಾರಿದರು.

ಯೋಗಾಸನದ ನಂತರ ಮಾತನಾಡಿದ ದೇವೇಗೌಡರು, ಮೂರು ವರ್ಷದಿಂದ ಪ್ರಧಾನಿ ಮೋದಿ ಯೋಗ ದಿನಾಚರಣೆಯನ್ನು ಆಚರಣೆಗೆ ತಂದಿದ್ದಾರೆ. ಮೋದಿಯವರು ಈಗ ಯೋಗಕ್ಕೆ ಒಂದು ಸ್ವರೂಪ ನೀಡಿದ್ದಾರೆ. ಹಿಂದೆ ಋಷಿ ಮುನಿಗಳು ತಮ್ಮ ಆರೋಗ್ಯವನ್ನು ಯೋಗ ಮಾಡುವ ಮೂಲಕ ಕಾಪಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರು 100-200 ವರ್ಷ ಬದುಕುತ್ತಿದ್ದರು. ಈಗಲೂ ಇಂಥ ಸಾಧಕರು ಹಿಮಾಲಯದಲ್ಲಿ ಬದುಕಿದ್ದಾರೆ ಎಂದರು.

23ನೇ ವಯಸ್ಸಿನಲ್ಲಿ ನಾನು ಕಾಂಟ್ರಾಕ್ಟ್ ಶುರು ಮಾಡಿದೆ. ಆಗ ಒಂದು ಸೈಕಲ್ ಇತ್ತು. ಬೆಳಿಗ್ಗೆ 5ರಿಂದ ಕೆಲಸ ಶುರು ಮಾಡುತ್ತಿದ್ದೆ. 70-80 ಕಿ.ಮೀ ಸೈಕಲ್ ತುಳಿಯುತ್ತಿದ್ದೆ. ಇದಕ್ಕಿಂತ ವ್ಯಾಯಾಮ ಬೇಕೆ? ಮೊದಲಿನಿಂದಲೂ ನಾನು ಶ್ರಮ ಜೀವಿ, ಮಿತ ಆಹಾರಿ ಎಂದು ತಮ್ಮ ಆರೋಗ್ಯದ ಗುಟ್ಟು ಬಿಚ್ಚಿಟ್ಟರು.

ವಿದ್ಯಾರ್ಥಿಗಳ ವಿಕಾಸಕ್ಕೆ ವ್ಯಾಯಾಮ, ಯೋಗ ಅಗತ್ಯ. ಇದನ್ನು ಎಲ್ಲ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಆದರೆ, ಬೆಂಗಳೂರಿನಲ್ಲಿ ವ್ಯಾಯಾಮ ಮಾಡಲು ಕೆಲವು ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಆದರೆ, ನೂತನ ಶಾಲೆ ಆರಂಭಿಸುವಾಗ ಕಡ್ಡಾಯವಾಗಿ ಆಟದ ಮೈದಾನ ಇರಲೇಬೇಕು ಈ ನಿಯಮವನ್ನು ಸರ್ಕಾರ ಪಾಲಿಸಬೇಕು ಎಂದು ಸರ್ಕಾರಕ್ಕೆ ಕಿವಿ ಮಾತು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.D.Deve Gowda yoga ಮೈದಾನ ಕಡ್ಡಾಯ