ಯಡಿಯೂರಪ್ಪ ಅವರ ಹೇಳಿಕೆಗೆ ಮುಖ್ಯಮಂತ್ರಿಯಿಂದ ತಿರುಗೇಟು


01-06-2018 502

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಯಾವಾಗ ಪತನವಾಗಲಿದೆಯೋ ಎಂಬುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಆಸೆಯಿಂದ ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ವ್ಯಂಗ್ಯವಾಡಿದರು.

ಸಮ್ಮಿಶ್ರ ಸರ್ಕಾರದ ಸಂಪುಟ ರಚನೆ ವಿಳಂಬ ಬಗ್ಗೆ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರ ರಚನೆಯಾದಾಗ ಹಲವಾರು ಕಾರಣಗಳಿಂದ ಸಂಪುಟ ರಚನೆ ವಿಳಂಬವಾಗುತ್ತದೆ ಅದನ್ನೇ ದೊಡ್ಡದು ಮಾಡಿ ಯಡಿಯೂರಪ್ಪ ಅವರು ಟೀಕಿಸಿವುದು ಸರಿಯಲ್ಲ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ಪುನರ್ ರಚನೆ ಬಗ್ಗೆ ನಾನೊಬ್ಬನೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಜತೆ ಚರ್ಚಿಸಿ ತೀರ್ಮಾನ ಮಾಡಬೇಕಾಗುತ್ತದೆ. ಸದ್ಯದಲ್ಲೇ ಸಂಪುಟ ಪುನರ್ ರಚನೆ ಆಗಲಿದೆ ಎಂದರು.

ಸಮ್ಮಿಶ್ರ ಸರ್ಕಾರದ ಸಂಪುಟ ರಚನೆ ವಿಳಂಬದ ಬಗ್ಗೆ ಯಡಿಯೂರಪ್ಪನವರು ಮಾತನಾಡುತ್ತಿದ್ದಾರೆ. ಹಿಂದೆ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ-ಬಿಡಿಪಿ ಸಮ್ಮಿಶ್ರ ಸರ್ಕಾರ ಸಂಪುಟ ರಚನೆಗೆ 2 ತಿಂಗಳು ಆಗಿತ್ತು ಎಂಬುದನ್ನು ನೆನಪು ಮಾಡಿದ ಅವರು, ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಲಿ. ಸಂಪುಟ ರಚನೆ ಉಸಾಬರಿ ಅವರಿಗೆ ಬೇಡ ಎಂದು ತಿರುಗೇಟು ನೀಡಿದರು.