ಕುಡುಕ ಗಂಡನನ್ನು ಕೊಲೆಗೈದ ಪತ್ನಿ


31-05-2018 681

ಬೆಂಗಳೂರು,ಮೇ.31-ನೇಪಾಳದಿಂದ ನಗರಕ್ಕೆ ಕೂಲಿ ಅರಿಸಿಕೊಂಡು ಬಂದಿದ್ದ  ಬಡ ಕುಟುಂಬವೊಂದು ದೊಡ್ಡಬಳ್ಳಾಪುರದ ನಾರನಹಳ್ಳಿ ಹೊರವಲಯದ ಕೋಳಿಫಾರಂನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬದ ಯಜಮಾನ ಕಳೆದ ಸೋಮವಾರ ಬರ್ಬರವಾಗಿ ಕೊಲೆಗೀಡಾಗಿ ಹೋಗಿದ್ದ.

ಯಜಮಾನನ್ನು ಕೊಲೆ ಮಾಡಿರುವುದು ಬೇರ್ಯಾರು ಅಲ್ಲ ಆತನ ಪತ್ನಿಯೇ.!ಗ್ರಾಮಸ್ಥರನ್ನ ಬೆಚ್ಚಿಬೀಳಿಸಿದ್ದ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಪೊಲೀಸರು ಕೊಲೆ ನಡೆದ ಎರಡು ದಿನದಲ್ಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ನಾರನಹಳ್ಳಿ ಹೊರವಲಯದ ಕೋಳಿಫಾರಂನಲ್ಲಿ ಕಳೆದ ಎರಡು ವರ್ಷಗಳಿಂದ ನೇಪಾಳ ಮೂಲದ ಬಿಮಲ್ ಮತ್ತು ಪೂರ್ಣಿಮಾ ಎಂಬ ದಂಪತಿ ಇಬ್ಬರು ಮಕ್ಕಳೊಂದಿಗೆ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಪ್ರತಿನಿತ್ಯ ಗಂಡ ಬಿಮಲ್ ಭೊಹರ ಕುಡಿದು ಬಂದು ಹೆಂಡತಿ ಜೊತೆ ಜಗಳ ಮಾಡುತಿದ್ದ ಅದೇ ರೀತಿ ಕಳೆದ ಶನಿವಾರ ಸಹ ಕಂಠಪೂರ್ತಿ ಕುಡಿದು ಮನೆಗೆ ಬಂದ ಬಿಮಲ್ ಭೋಹರಾ ಪತ್ನಿ ಪೂರ್ಣಿಮಾ ಜೊತೆ ಜಗಳ ಶುರು ಮಾಡಿಕೊಂಡಿದ್ದ.

ಕುಡಿದ ಅಮಲಿನಲ್ಲಿ ಇಂದು ನಿನ್ನ ಕೊಲೆಮಾಡುವುದಾಗಿ ಪತ್ನಿ ಪೂರ್ಣಿಮಾಗೆ ಹೆದರಿಸಿದ್ದ. ಹೀಗಾಗಿ ಪ್ರತಿನಿತ್ಯ ಕುಡಿದು ಗಲಾಟೆ ಮಾಡ್ತಿದ್ದ ಗಂಡನಿಂದ ಬೇಸತ್ತ ಪತ್ನಿ ಪೂರ್ಣಿಮಾ, ನಾನೇ ನಿನ್ನನ್ನು ಇಂದು ಮುಗಿಸಿ ಬಿಡ್ತೀನಿ ಎಂದು ಜಗಳ ಮಾಡಿದ್ದು, ಹಗ್ಗ ಎತ್ತಿಕೊಂಡು ಗಂಡನ ಕೈ ಕಾಲು ಕಟ್ಟಲು ಮುಂದಾಗಿದ್ದಾಳೆ.

ಈ ವೇಳೆ ಪ್ರತಿನಿತ್ಯದಂತೆ ಇಂದು ಸಹ ಬೆದರಿಸುತ್ತಿದ್ದಾಳೆ ಎಂದು ಲಘುವಾಗಿ ತೆಗೆದುಕೊಂಡ ಕುಡುಕ ಗಂಡ ಹೇಗೆ ಸಾಯಿಸುವೆ ನಾನು ನೋಡ್ತೀನಿ ಎಂದು ಹೆಂಡತಿಯಿಂದ ಕೈ ಕಾಲು ಕಟ್ಟಿಸಿಕೊಂಡಿದ್ದಾನೆ. ಈ ವೇಳೆ ಗಂಡನ ಕೈ ಕಾಲು ಕಟ್ಟಿದ ಪತ್ನಿ ಪ್ರತಿನಿತ್ಯದ ಕಿರುಕುಳದಿಂದ ಬೇಸತ್ತು ನೋಡು ನೋಡುತ್ತಿದ್ದಂತೆ ಇಬ್ಬರು ಮಕ್ಕಳ ಮುಂದೆಯೇ ಚಾಕುವಿನಿಂದ ಗಂಡನ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾಳೆ.

ಗಂಡನನ್ನು ಆವೇಶದಲ್ಲಿ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಪೂರ್ಣಿಮಾಗೆ ಗಂಡನ ಮೃತದೇಹವನ್ನ ಏನು ಮಾಡುವುದು ಎಂದು ಚಿಂತಿಸಿ, ಮನೆಯಲ್ಲೆ ಗಂಡನ ಮೈ ಮೇಲಿನ ರಕ್ತದ ಕಲೆಗಳನ್ನ ತೊಳೆದು ಬಟ್ಟೆ ಬದಲಿಸಿ ರಾತ್ರಿ ಪೂರ್ತಿ ಶವವನ್ನ ಮನೆ ಮುಂದೆ ಮಲಗಿಸಿದ್ದಾಳೆ. ಗಂಟೆಗಳು ಕಳೆದಂತೆಲ್ಲಾ ಗಂಡನನ್ನ ಕೊಲೆ ಮಾಡಿದ ಭಯ ಪತ್ನಿಗೆ ಆವರಿಸಿದ್ದು ಮಧ್ಯರಾತ್ರಿ 3ಗಂಟೆ ಸುಮಾರಿಗೆ ಸಂಬಂಧಿಕರಿಗೆ ಕರೆ ಮಾಡಿ ಗಂಡನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಮನೆ ಮುಂದೆ ಹಾಕಿರುವುದಾಗಿ ನಾಟಕ ಶುರುಮಾಡಿದ್ದಾಳೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಂಬಂಧಿ ದಿನೇಶ್ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ದೊಡ್ಡಬೆಳವಂಗಲ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ತನಿಖೆ ಮುಂದುವರಿಸಿದ್ದರು.

ಮನೆ ಸುತ್ತಮುತ್ತ ಕೊಲೆಯ ಯಾವುದೇ ಕುರುಹುಗಳು ಸಿಗದ ಕಾರಣ ಪೊಲೀಸರು ಮೃತದೇಹವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಈ ವೇಳೆ ಮೃತನ ಮೈ ಮೇಲಿನ ಬಟ್ಟೆಗಳಲ್ಲಿ ರಕ್ತದ ಕಲೆಗಳಿಲ್ಲದ್ದನ್ನ ಕಂಡು ಅನುಮಾನಗೊಂಡ ಪೊಲೀಸರು ಪತ್ನಿ ಮತ್ತು ಮಕ್ಕಳನ್ನ ಬೇರೆ ಬೇರೆಯಾಗಿ ವಿಚಾರಿಸಿದಾಗ ಕುಡಿತದಿಂದ ಬೇಸತ್ತು ಪತ್ನಿಯೇ ಗಂಡನನ್ನು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಸಂಸಾರದ ಬಂಡಿ ಸಾಗಿಸುವುದಕ್ಕೆ ಅಂತ ದೇಶ ಬಿಟ್ಟು ಮತ್ತೊಂದು ದೇಶಕ್ಕೆ ಬಂದು ಬದುಕು ಕಟ್ಟಿಕೊಂಡಿದ್ದ ದಂಪತಿಗಳು ಕೇವಲ ಕುಡಿತದ ಚಟದಿಂದ ಸಂಸಾರವನ್ನೆ ಹಾಳು ಮಾಡಿಕೊಂಡಿದ್ದು ನಿಜಕ್ಕೂ ದುರಂತ.ಕುಡಿದ ಮತ್ತಿನಲ್ಲಿ ಹೆಂಡತಿ ಕೈನಲ್ಲಿ ಗಂಡ ಬರ್ಬರವಾಗಿ ಕೊಲೆಯಾದರೆ ಮಾಡಿದ ತಪ್ಪಿಗೆ ಹೆಂಡತಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಳೆ. ಹೀಗಾಗಿ ಅಪ್ಪ-ಅಮ್ಮನ ಜೊತೆ ದೇಶ ಬಿಟ್ಟು ಬಂದಿದ್ದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ನೇಪಾಳ ಕೂಲಿ ಪತ್ನಿ ಕೊಲೆ