ಕರ್ನಾಟಕ ರೌಡಿ ರಾಜ್ಯವಾಗಲಿದೆಯಾ?!!


25-05-2018 518

ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತ ಹೇಗಿರುತ್ತದೆ ಎಂದು ಜನತೆ ಊಹಿಸತೊಡಗಿದ್ದಾರೆ. ಕುಮಾರಸ್ವಾಮಿಯವರ ನಡವಳಿಕೆ ಅವರ ಪಕ್ಷದಲ್ಲಿರುವ ನಾಯಕರುಗಳ ಗುಣಮಟ್ಟ, ಮುಖ್ಯಮಂತ್ರಿಗಳ ಅಧಿಕಾರ ಕೌಶಲ್ಯ, ವಿವೇಚನೆ, ಕಾಂಗ್ರೆಸ್ ಪಕ್ಷದ ನಾಯಕರುಗಳ ವೈಯಕ್ತಿಕ ಗುರಿಗಳು ಇವೆಲ್ಲದರ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಎಷ್ಟು ಸುವ್ಯವಸ್ಥಿತವಾಗಿ ನಡೆಯಬಹುದೆಂದು ಯೋಚಿಸುವವರಿಗೆ ಒಂದು ಆಘಾತ ಕಾದಿದೆ. ಕುಮಾರಸ್ವಾಮಿಯವರು ಯಾರನ್ನೂ ಎದುರು ಹಾಕಿಕೊಳ್ಳುವವರಲ್ಲ, ಅಧಿಕಾರಿಗಳ ಮೇಲೆ ದರ್ಪ ತೋರಿದವರಲ್ಲ ಹಾಗೆ ಹೇಳಬೇಕೆಂದರೆ ಕಳೆದ ಬಾರಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮುಖ್ಯಮಂತ್ರಿ ಪದವಿಯನ್ನು ನಿಭಾಯಿಸಿದವರೇ ಅವರ ತಂದೆ ಹೆಚ್.ಡಿ.ದೇವೇಗೌಡರು ಎನ್ನಲಾಗಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿ ರಾಜ್ಯಭಾರ ಮಾಡಲಿರುವ ಹೆಚ್.ಡಿ.ಕುಮಾರಸ್ವಾಮಿಯವರು ಸಂಪೂರ್ಣವಾಗಿ ತಾಳ ತಪ್ಪಿದ ಸರ್ಕಾರ ನಡೆಸುವುದು ಖಚಿತ ಎಂದು ಹೇಳಲಾಗುತ್ತಿದೆ. ಹಾಗೇ ಜೆಡಿಎಸ್‍ನಲ್ಲಿರುವ ಕೆಲವು ಹಳೆಯ ನಾಯಕರುಗಳನ್ನು ಬಿಟ್ಟರೆ ಬಹುತೇಕರು ಹೊಸದಾಗಿ ಬಂದಿರುವವರು ಅದಲ್ಲದೇ ಹೊಸಬರ ಪೈಕಿ ಅನೇಕ ಮಂದಿ ಅನುಮಾನಾಸ್ಪದ ಹಿನ್ನೆಲೆಯುಳ್ಳವರೂ ಆಗಿದ್ದಾರೆ. ಜೇಡರಳ್ಳಿ ಕೃಷ್ಣಮೂರ್ತಿ, ಕಬ್ಬಡಿ ಬಾಬು, ಗೊಟ್ಟಿಗೆರೆ ಮಂಜುನಾಥ್ ಮತ್ತಿತರರು ಈಗ ಜೆಡಿಎಸ್‍ನ ರಾಜ್ಯಮಟ್ಟದ ನಾಯಕರಾಗಿಬಿಟ್ಟಿದ್ದಾರೆ. ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗೆ ಹಳ್ಳಿಹಳ್ಳಿಗಳಲ್ಲಿ ಜಾತಿ, ಕಲಹಗಳು ರಾಜಕೀಯ ಜಿದ್ದಿನ ಹೊಡೆದಾಟಗಳು ನಡೆಯುವ ಸಾಧ್ಯತೆಯಿದೆ ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗೇ ಶೇ.50ರಷ್ಟು ಕ್ಷೇತ್ರಗಳಲ್ಲಿ ಬಿಜೆಪಿಯ ಪಾರುಪಥ್ಯ ಇರುವುದರಿಂದ ಅಲ್ಲೂ ಕೂಡ ಕಾನೂನು ವ್ಯವಸ್ಥೆ ಕಾಪಾಡುವುದು ಸರ್ಕಾರಕ್ಕೆ ಕಷ್ಟವಾಗಬಹುದು ಎಂದು ಊಹಿಸಲಾಗುತ್ತಿದೆ. ಮುಖ್ಯಮಂತ್ರಿಯಾಗುವ ತನಕ “ನನಗೊಂದು ಅವಕಾಶ ಕೊಡಿ” ಎಂದು ಹೇಳುತ್ತಿದ್ದ ಕುಮಾರಸ್ವಾಮಿಯವರು ರಾಜ್ಯದಲ್ಲಿ ಕಾನೂನು ಹದಗೆಟ್ಟರೆ ಇನ್ನೊಂದು ಅವಕಾಶ ಕೇಳಲು ಸಾಧ್ಯವಿಲ್ಲ. ಹಾಗೇ ಕಾನೂನು ವ್ಯವಸ್ಥೆ ಹದಗೆಟ್ಟ ಕರ್ನಾಟಕ ರೌಡಿ ರಾಜ್ಯವಾಗುವ ಮುನ್ನ ಸಮ್ಮಿಶ್ರ ಸರ್ಕಾರದ ನಾಯಕರುಗಳು ಎಚ್ಚೆತ್ತುಕೊಂಡರೆ ಅದು ಅವರಿಗೂ ಒಳ್ಳೆಯದೂ, ನಾಯಕರುಗಳಿಗೂ ಒಳ್ಳೆಯದು ಎನ್ನುತ್ತಾರೆ ಸೂಪರ್ ಸುದ್ದಿ ಮಾತನಾಡಿಸಿದ ಅನೇಕ ಸಾಮಾಜಿಕ ಚಿಂತಕರು.


ಒಂದು ಕಮೆಂಟನ್ನು ಬಿಡಿ