ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಬೈಕ್ ಕಳ್ಳರ ಬಂಧನ


08-05-2018 553

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಟಿ20 ಐಪಿಎಲ್ ಮ್ಯಾಚ್ ನೋಡಲು ಬರುವವರ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿದ್ದಾರೆ.

ಹರ್ಷವರ್ಧನ, ಆನಂದ, ಹರಿಕೃಷ್ಣ ಮತ್ತು ಚಂದ್ರಶೇಖರ್ ಬಂಧಿತ ಆರೋಪಿಗಳು. ಐಪಿಎಲ್ ಪಂದ್ಯ ನಡೆಯುವ ವೇಳೆ ಕಬ್ಬನ್ ಪಾರ್ಕ್ ಮತ್ತು ಸ್ಟೇಡಿಯಂ ಸುತ್ತಲಿನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್‍ಗಳ ಹ್ಯಾಂಡಲ್ ಮುರಿದು ಕಳ್ಳತನ ಮಾಡುತ್ತಿದ್ದರು. ಜೊತೆಗೆ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ರಾಜಕೀಯ ಸಮಾವೇಶಗಳ ಬಳಿಗೆ ಹೋಗಿ ಅಲ್ಲಿ ನಿಲ್ಲಿಸಿರುವ ಬೈಕ್‍ಗಳನ್ನೂ ಎಗರಿಸುತ್ತಿದ್ದರು.

ಆರೋಪಿಗಳಿಂದ ಒಟ್ಟು 37 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಂಧ್ರದ ಚಿತ್ತೂರಿನವರಾದ ಈ ಆರೋಪಿಗಳು ಬೆಂಗಳೂರಿನಲ್ಲಿ ಐಪಿಎಲ್ ಮ್ಯಾಚ್ ಮತ್ತು ರಾಜಕೀಯ ಸಮಾವೇಶಗಳು ಇರುವ ಮುನ್ನಾ ದಿನ ಬೆಂಗಳೂರಿಗೆ ಬರುತ್ತಿದ್ದರು.

ಕಳವು ಬೈಕ್‍ಗಳನ್ನು ಆಂಧ್ರಗೆ ಕೊಂಡೊಯ್ದು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಎಲ್ ಸಮಯದಲ್ಲಿ ಬೈಕ್‍ಗಳು ಕಳುವಾದ ಬಗ್ಗೆ ಕಬ್ಬನ್ ಪಾರ್ಕ್ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ತನಿಖೆ ಆರಂಭಿಸಿದ ಪೊಲೀಸರು ಈಗ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Bike robbery Chinnaswamy Stadium ಕಮರ್ಷಿಯಲ್ ಯಶಸ್ವಿ