6 ಸಾವಿರ ಸೈಬರ್ ಕ್ರೈಮ್ ಕೇಸ್: ಶೇ.4ರಷ್ಟು ಮಾತ್ರ ಇತ್ಯರ್ಥ


03-05-2018 618

ಬೆಂಗಳೂರು: ಕಳೆದ ವರ್ಷ6ಸಾವಿರಕ್ಕೂ ಹೆಚ್ಚು ಸೈಬರ್ ಅಪರಾಧಗಳು ದಾಖಲಾಗಿದ್ದು ಅದರಲ್ಲಿ ಕೇವಲ ಶೇ.4ರಷ್ಟು ಪ್ರಕರಣಗಳು ಮಾತ್ರ ಇತ್ಯರ್ಥವಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಸೈಬರ್ ಅಪರಾಧ ಪ್ರಕರಣಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇತ್ಯರ್ಥವಾಗಲು ಸೈಬರ್ ಪೊಲೀಸ್ ಠಾಣೆಯಲ್ಲಿನ ಸಿಬ್ಬದ್ದಿಂಗಳ ಸಂಖ್ಯೆಯೇ ಪ್ರಮುಖ ಕಾರಣವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಸಂಖ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಳೆದ ವರ್ಷ ಏಪ್ರಿಲ್‍ನಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರಾಜ್ಯದ ಏಕೈಕ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಸ್ಥಾಪಿಸಲಾಯಿತು.

ಇಲ್ಲಿ ಈವರೆಗೆ 6,000ಕ್ಕೂ ಹೆಚ್ಚು ಸೈಬರ್ ಅಪರಾಧಗಳು ದಾಖಲಾಗಿವೆ. ವಿಪರ್ಯಾಸದ ಸಂಗತಿ ಎಂದರೆ ಇವುಗಳನ್ನು ನಿಭಾಯಿಸಲು ಅಲ್ಲಿರುವುದು ಕೇವಲ 26 ಮಂದಿ ಸಿಬ್ಬಂದಿಗಳು.

ಠಾಣೆಯಲ್ಲಿ ಒಬ್ಬ ಇನ್ಸ್ಪೆಕ್ಟರ್, ಇಬ್ಬರು ಸಬ್- ಇನ್ಸ್ಪೆಕ್ಟರ್ ಗಳು, ಮೂವರು ಸಹಾಯಕ ಸಬ್ ಇನ್ಸ್ಪೆಕ್ಟರ್ ಗಳು  ಹಾಗೂ 20 ಪೇದೆಗಳಿದ್ದಾರೆ. ಈ ವರೆಗೆ 6,000ಕ್ಕೂ ಹೆಚ್ಚು ಕೇಸ್‍ಗಳು ದಾಖಲಾಗಿರುವುದರಿಂದ ಪ್ರತಿ ಸಿಬ್ಬಂದಿ ತಲಾ 236 ಪ್ರಕರಣಗಳನ್ನು ನಿಭಾಯಿಸುವ ಭಾರೀ ಹೊರೆ ಬಿದ್ದಿದೆ. ಅಲ್ಲದೇ ಸೈಬರ್ ಅಪರಾಧಗಳ ಸಂಖ್ಯೆ ಏರುತ್ತಲೇ ಇದೆ ಈ ವರ್ಷ ಜನವರಿ 1 ರಿಂದ ಏಪ್ರಿಲ್ 16ರವರೆಗೆ 109 ದಿನಗಳಲ್ಲಿ 2,218 ದೂರುಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,020 ಪ್ರಕರಣಗಳು ದಾಖಲಾಗಿತ್ತು.

ಈ ವರ್ಷ ದಾಖಲಾಗಿರುವ 1.128 ಪ್ರಕರಣಗಳನ್ನು ಗಂಭೀರ ಆರ್ಥಿಕ ಅಪರಾಧಗಳು ಹಾಗೂ 1,090ಕ್ಕೂ ಹೆಚ್ಚು ದೂರುಗಳು ಸಣ್ಣಪುಟ್ಟ ಅಪರಾಧ ಸ್ವರೂಪವೆಂದು ಪರಿಗಣಿಸಲಾಗಿದೆ. ದಾಖಲಾಗಿರುವ ಸಣ್ಣ ಪ್ರಕರಣಗಳಲ್ಲಿ 10,000 ರೂ.ಗಳಿಗಿಂತ ಕಡಿಮೆ ಮೊತ್ತದ ಹಣ ಕಳೆದುಕೊಂಡಿರುವ ಕೇಸ್‍ ಗಳಾಗಿವೆ.

ಸೈಬರ್ ಕ್ರೈಮ್ ಘಟಕದಲ್ಲಿ ಸಿಬ್ಬಂದಿ ಕೊರತೆ ಇದೆ ಎಂಬುದನ್ನು ಜಂಟಿ ಪೊಲೀಸ್ ಆಯುಕ್ತ(ಅಪರಾಧ) ಸತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಇಲ್ಲಿ ಕ್ರೈಮ್ ಅಪರಾಧಗಳ ಪ್ರಕರಣಗಳನ್ನು ದಾಖಲಿಸಲು ಸೂಕ್ತ ವ್ಯವಸ್ಥೆ ಇದೆ. ಸಿಬ್ಬಂದಿಯೂ ಸಮರ್ಥವಾಗಿದ್ದಾರೆ. ಆದರೆ ಈ ವಿಭಾಗಕ್ಕೆ ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ ಎಂದು ಅವರು ಹೇಳುತ್ತಾರೆ. ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ದುರದೃಷ್ಟ ಸಂಗತಿ ಎಂದರೆ ಇಂಥ ಅಪರಾಧ ಕೃತ್ಯಗಳಿಗೆ ಬಲಿಯಾಗುತ್ತಿರುವವರಲ್ಲಿ ಸುಶಿಕ್ಷಿತರು ಮತ್ತು ತಾಂತ್ರಿಕ ಜ್ಞಾನ ಹೊಂದಿರುವ ಮಂದಿಯೇ ಹೆಚ್ಚು ಎಂಬುದು ಗಮನಿಸಬೇಕಾದ ಅಂಶವಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

cyber crime Inspector ಕೃತ್ಯ ಇನ್ಸ್ಪೆಕ್ಟರ್