ಸಿಂಗಪುರದಲ್ಲಿ ವಿದ್ವತ್ ಗೆ ಹೆಚ್ಚಿನ ಚಿಕಿತ್ಸೆ!


30-04-2018 594

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಉದ್ಯಮಿ ಪುತ್ರ ವಿದ್ವತ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲ್ಯ ಆಸ್ಪತ್ರೆಯಲ್ಲಿ ಗುಣಮುಖರಾಗಿ ಮನೆ ಸೇರಿದ ನಂತರ ವಿದ್ವತ್‍ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವಿದ್ವತ್ ಕುಟುಂಬದವರು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಸಿಂಗಪುರದ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ವಿಶೇಷ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ನಲಪಾಡ್ ಮತ್ತು ಆತನ ಗ್ಯಾಂಗ್‍ನ ಹಲ್ಲೆಯಿಂದಾಗಿ ವಿದ್ವತ್ ಮುಖದ ಮೂಳೆಗಳು, ಕತ್ತಿನ ಭಾಗ ಮತ್ತು ಎದೆಯ ಭಾಗದಲ್ಲಿ ಬಬಲವಾದ ಗಾಯಗಳಾಗಿದ್ದವು. ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆತನನ್ನು ಸಿಂಗಪುರದ ಆಸ್ಪತ್ರೆಗೆ ಸೇರಿಸುವ ಬಗ್ಗೆ ಕುಟುಂಬ ಚಿಂತನೆ ನಡೆಸಿತ್ತು.

ಆದರೆ ಒಂದು ಹಂತದ ಚಿಕಿತ್ಸೆ ಮುಗಿದ ನಂತರ ಆ ಬಗ್ಗೆ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದರು. ಆದರೆ ಈಗ ಉಸಿರಾಟದ ತೊಂದರೆ ಕಾಣಿಸಿಕೊಂಡಿರುವುದರಿಂದ ದೀರ್ಘ ಕಾಲದಲ್ಲಿ ಸಮಸ್ಯೆಗಳು ಮತ್ತೆ ಬಾಧಿಸದಂತೆ ತಡೆಯಲು ವಿಶೇಷ ಚಿಕಿತ್ಸೆಗಾಗಿ ಸಿಂಗಪುರದ ಹೈಟೆಕ್ ಆಸ್ಪತ್ರೆಗೆ ವಿದ್ವತ್‍ನನ್ನು ದಾಖಲಿಸುವ ನಿರ್ಧಾರಕ್ಕೆ ಕುಟುಂಬ ಬಂದಿತ್ತು ಎಂದು ತಿಳಿದು ಬಂದಿದೆ. ಕಳೆದ ವಾರವೇ ವಿದ್ವತ್‍ನನ್ನು ಸಿಂಗಪುರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದ್ದು ಈ ಬಗ್ಗೆ ಅವರ ಕುಟುಂಬ ಅಧಿಕೃತವಾಗಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಯುಬಿ ಸಿಟಿಯ ಫೆರ್ಜಿ ಕೆಫೆ ಹೋಟೇಲ್‍ನಲ್ಲಿ ವಿದ್ವತ್ ಊಟ ಮಾಡುವಾಗ ಕಾಲು ಚಾಚಿಕೊಂಡಿದ್ದ ವಿಷಯಕ್ಕೆ ಜಗಳ ಮಾಡಿದ ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿದ್ದ ಅಲ್ಲದೇ ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದಾಗ ಅಲ್ಲಿಗೂ ನುಗ್ಗಿ ದಾಂಧಲೆ ನಡೆಸಿದ್ದನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್‍ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು ಆತ ಕಳೆದ ಹಲವು ದಿನಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

mohammed nalapad Vidwath ಯುಬಿ ಸಿಟಿ ಧಾಂದಲೆ