ಅವಧಿಗೆ ಮುನ್ನ ಚುನಾವಣೆಗೆ ಕೈ ಹಿಂದೇಟು..!?


21-05-2017 557

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೊಂದೇ  ವರ್ಷ ಬಾಕಿ ಇದೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳೂ ಬರೋ ಅಸೆಂಬ್ಲಿ ಎಲೆಕ್ಷನ್ ಗೆ ಸಾಕಷ್ಟು ತಯಾರಿ ನಡೆಸುತ್ತಿವೆ. ಪ್ರಮುಖ ಪ್ರತಿಪಕ್ಷಗಳಾದ ಜೆಡಿಎಸ್ ಹಾಗೂ ಕಮಲ ಪಾಳಯ ತಂತ್ರಗಾರಿಗೆ ಶುರುವಿಟ್ಟಿವೆ. ರಣತಂತ್ರ ರೂಪಿಸುತ್ತಿವೆ. ಇವೆಲ್ಲದರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅವಧಿಗೆ ಮುನ್ನವೇ ಚುನಾವಣೆ ನಡೆಸಲು ತಯಾರಿ ನಡೆಸಿ ದೆ ಅನ್ನೋ ಗುಲ್ಲೆದ್ದಿರೋದು ಈಗಾಗಲೇ ತಿಳಿದಿರುವ ಸಂಗತಿ.

ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರು ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತಂತೆ ರಣತಂತ್ರ ಆರಂಭಿಸುವ ಮುನ್ನವೇ ಚುನಾವಣೆಯನ್ನು ನಡೆಸುವ ಮೂಲಕ ಬಿಜೆಪಿಯನ್ನು ತಬ್ಬಿಬ್ಬುಗೊಳಿಸುವುದು ಈ ಚಿಂತನೆಯ ಹಿಂದಿರುವ ಉದ್ದೇಶ ಎಂದೂ ಹೇಳಲಾಗಿದೆ. ಅಲ್ಲದೇ ನಂಜನಗೂಡು ಮತ್ತು ಗುಂಡ್ಲುಪೇಟೆಗಳ ಉಪ ಚುನಾವಣೆಯ ಗೆಲುವಿನಿಂದ ಸಿಕ್ಕಿರುವ ಜನ ಬೆಂಬಲ ಹಾಗೂ ಉತ್ಸಾಹವೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವನ್ನು ಈ ಚಿಂತೆಗೆ ಪ್ರೇರೇಪಿಸಿದೆ ಎನ್ನಬಹುದು.

ಆದರೆ ಲೇಟೆಸ್ಟ್ ವಿಷಯ ಏನು ಅಂದರೆ, ಆಡಳಿತ ಪಕ್ಷ ಕಾಂಗ್ರೆಸ್ ನಲ್ಲಿ ಮಾತ್ರ ಈಗಲೇ ಚುನಾವಣೆ ಬೇಡ. ದುಡುಕೋದು ಬೇಡ ಅನ್ನೋ ಮಾತುಗಳು ಕೇಳಿಬಂದಿವೆ. ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅವರು ಮಾಡಿದಂತಹ ತಪ್ಪನ್ನು ನಾವು ಮಾಡೋದು ಬೇಡ ಅನ್ನೋದು ಕಾಂಗ್ರೆಸ್‍ನ ಕೆಲ ಮುಖಂಡರ ಅಭಿಪ್ರಾಯವಾಗಿದೆಯಂತೆ. ಪೂರ್ಣ ಅವಧಿ ಮುಗಿಸಿಯೇ ಚುನಾವಣೆ ನಡೆಯಲಿ ಅನ್ನೋದು ಅವರ ಅಭಿಪ್ರಾಯವಾಗಿದೆ. ಅಲ್ಲದೇ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣದಿಂದಾಗಿ ಆಡಳಿತ ಪಕ್ಷ ಕಾಂಗ್ರೆಸ್ ಗೆ ಹಿನ್ನಡೆಯಾಗಬಹುದು ಅನ್ನೋದು ಪಕ್ಷಗೊಳಗೆ ಕೇಳಿಬರುತ್ತಿರೋ ಮಾತಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆ ಎದುರು ನೋಡುತ್ತಿರುವಂತೆ ಕಾಂಗ್ರೆಸ್ ಮತ್ತಷ್ಟು ಚುರುಕಾಗಿ ಹೆಜ್ಜೆ ಇಡುತ್ತಿದೆ. ರಾಜ್ಯದಲ್ಲಿ ಮತ್ತಷ್ಟು ಹೊಸ ಹೊಸ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಯಾರಿ ನಡೆಸುತ್ತಿದೆ. ಅಲ್ಲದೇ ಪ್ರತಿಪಕ್ಷಗಳ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್ ಬಿಜೆಪಿಯಲ್ಲೇನಾದರೂ ಒಳಜಗಳ ಹೆಚ್ಚಾದರೆ ಚುನಾವಣೆಗೆ ಹೋಗಬಹುದು ಅಥವಾ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ  ಗಣಿ ಲಂಚ ಪ್ರಕರಣ ಕಂಟಕವಾದರೆ ಕಾಂಗ್ರೆಸ್ ಇದನ್ನು ಗಂಭೀರವಾಗಿ ಪರಿಗಣಿಸೋದಂತೂ ಖಂಡಿತ ಎನ್ನುತ್ತಿವೆ ರಾಜಕೀಯ ಮೂಲಗಳು.

 


ಒಂದು ಕಮೆಂಟನ್ನು ಬಿಡಿ