ಅಂಬಿ ಮುನಿಸು: ಮಂಡ್ಯ ಟಿಕೆಟ್ ಯಾರಿಗೆ?


23-04-2018 562

ಬೆಂಗಳೂರು: ಟಿಕೆಟ್ ಘೋಷಣೆಯಾಗಿದ್ದರೂ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸದೆ ಕಾಂಗ್ರೆಸ್ ವರಿಷ್ಠರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಮಾಜಿ ಸಚಿವ ಹಾಗೂ ಚಿತ್ರನಟ ಅಂಬರೀಶ್ ಅವರ ಮುಂದಿನ ನಡೆ ಏನು?

ಕಾಂಗ್ರೆಸ್ ಪಕ್ಷ ಅಂಬರೀಶ್ ಅವರಿಗೆ ಮೊದಲ ಪಟ್ಟಿಯಲ್ಲೇ ಮಂಡ್ಯ ಟಿಕೆಟ್ ಪ್ರಕಟಿಸಲಾಗಿದೆ. ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಆದರೂ ಅಂಬರೀಶ್ ನಾಮಪತ್ರ ಸಲ್ಲಿಸದೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೂ ಸಿಗದೆ ಮೈಸೂರು-ಬೆಂಗಳೂರು ನಡುವೆ ಜೂಟಾಟ ನಡೆಸಿದ್ದಾರೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಸೂಕ್ತ ಕಾರಣ ನೀಡದೆ ಸಚಿವ ಸ್ಥಾನದಿಂದ ಕೆಳಗಿಳಿಸಿದರು ಎನ್ನುವುದು ಅಂಬರೀಶ್ ಅವರ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದ್ದು, "ನಾನು ಚುನಾವಣೆಗೆ ಸ್ಪರ್ಧಿಸಲ್ಲ, ನನ್ನ ಬದಲಿಗೆ ಬೇರೆ ಯಾರ ಹೆಸರನ್ನೂ ಹೇಳಲ್ಲ, ಯಾರ ಪರವೂ ಪ್ರಚಾರ ನಡೆಸಲ್ಲ, ಯಾರೊಂದಿಗೂ ಚರ್ಚಿಸಲ್ಲ, ಯಾವ ಪಕ್ಷವನ್ನೂ ಸೇರಲ್ಲ" ಎಂದು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.

ನಿನ್ನೆ ಮೈಸೂರಿನಲ್ಲಿದ್ದ ಅಂಬರೀಶ್, ಅಲ್ಲಿಯೇ ಇದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವರು ಎಂದು ನಿರೀಕ್ಷಿಸಲಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಮಂಡ್ಯದಿಂದ ಬಂದಿದ್ದ ತಮ್ಮ ಬೆಂಬಲಿಗರಿಗೂ ಸಿಕ್ಕಿರಲಿಲ್ಲ. ದಿಢೀರನೆ ಬೆಂಗಳೂರಿಗೆ ತೆರಳಿದ್ದರು.

ನಾಮಪತ್ರ ಸಲ್ಲಿಕೆಗೆ ನಾಳೆಯೆ ಕೊನೆ ದಿನ. ಹಾಗಾಗಿ, ಚಿಂತಿತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅಂಬರೀಶ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮನವೊಲಿಸುವರು ಎನ್ನಲಾಗಿದೆ. ಈ ಹಿಂದೆ ಸಚಿವ ಕೆ.ಜೆ.ಜಾರ್ಜ್ ಅವರು ಅಂಬರೀಶ್ ಮನವೊಲಿಸಲು ನಡೆಸಿದ ಪಯತ್ನ ಯಶಸ್ವಿಯಾಗಿರಲಿಲ್ಲ. ಈ ಮಧ್ಯೆ, ಅಂಬರೀಶ್, ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾಗುವರು ಎನ್ನುವ ಸುದ್ದಿಯೂ ಹರಡಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ambareesh Mandya ticket ನಾಮಪತ್ರ ದೂರವಾಣಿ