'ಬಿಜೆಪಿಯವರಿಗೆ ಸಂವಿಧಾನದ ಬೆಲೆಯೇ ಗೊತ್ತಿಲ್ಲ'-ಸಿಎಂ


20-04-2018 464

ಮೈಸೂರು: ರಾಜ್ಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೈಸೂರಲ್ಲಿ ಮಗನ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ  ಸಂವಾದ ನಡೆಸಿದರು. ಇದಕ್ಕೂ ಮುನ್ನ ಸಿಎಂ ನಿವಾಸದ ಬಳಿಯಲ್ಲಿ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ, ಸಿಎಂಗೆ ಬೆಂಬಲ ನೀಡಲು ನಾನು ಮೈಸೂರಿಗೆ ಬಂದಿದ್ದೇನೆ. ಮಾನಸಿಕವಾಗಿ ಮತ್ತೆ ಎಲ್ಲ ರೀತಿಯ ಬೆಂಬಲ ನೀಡುತ್ತೇವೆ. ಈ ಬಾರಿ ಏನಾದರೂ ಆಗಲಿ ಸಿಎಂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಬೇಕು ಅನ್ನೋದು ನಮ್ಮೆಲ್ಲರ ಉದ್ದೇಶ ಎಂದರು.

ಇನ್ನು ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ ಸಿಎಂ, ಪ್ರತಿನಿತ್ಯದ ರಾಜಕೀಯ ಸ್ಥಿತ್ಯಂತರಗಳಲ್ಲಿ ನೀವೆಲ್ಲ ಭಾಗಿಯಾಗುತ್ತಿದ್ದೀರಿ, 2013ರಲ್ಲಿ ಜನ ನಮ್ಮನ್ನು ಆಶೀರ್ವಾದ ಮಾಡಿದರು, ಐದು ವರ್ಷ ನಾವು ಅಧಿಕಾರ ಮಾಡಿದ್ದೇವೆ, ನಮ್ಮ ಸರಕಾರ 2013ರಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ, ಪ್ರಣಾಳಿಕೆಯಲ್ಲಿ ಇಲ್ಲದಿದ್ದ ಕಾರ್ಯಕ್ರಮಗಳನ್ನೂ ಜಾರಿ ಮಾಡಿದ್ದೇವೆ, ಹಾಗಾಗಿ ನಮ್ಮ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಅಲೆ ಇಲ್ಲ ಎಂದರು.

ಕಳೆದ ಡಿಸೆಂಬರ್ ನಿಂದ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ, ಜನರ ಭಾವನೆ, ನಾಡಿ ಮಿಡಿತಗಳನ್ನು ಸ್ಪಷ್ಟವಾಗಿ ಗಮನಿಸಿದ್ದೇನೆ, ರಾಜ್ಯದಲ್ಲಿ ಪ್ರಭುತ್ವದ ವಿರೋಧಿ ಅಲೆ ಇಲ್ಲ ಎಂದು ಪುನರುಚ್ಛರಿಸಿದರು.

ಬಿಜೆಪಿಯವರ ಸುಳ್ಳು ಮಾತುಗಳನ್ನು ನಂಬಲು ಜನ ಮೂರ್ಖರಲ್ಲ ಎಂದ ಸಿಎಂ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಡೆದಿರುವ ಅಪಘಾತವನ್ನು ಕೊಲೆ ಯತ್ನ ಅಂತ ಹೆಗಡೆ ಹೇಳುತ್ತಿರುವುದಕ್ಕೆ ನನ್ನ ಆಕ್ಷೇಪ ಇದೆ. ಕೇಂದ್ರ ಸಚಿವರಾಗಿ ಹೀಗೆ ಮಾತನಾಡೋದು ಸರಿನಾ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ, ಆ ಮೂಲಕ ಜನರಿಂದ ಬಿಜೆಪಿಯವರು ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ ಅಂತಾರೆ, ಆದರೆ ಅಮಿತ್ ಷಾ ತಾವು ಹಿಂದೂ ಅಂತ ಸುಳ್ಳು ಹೇಳುತ್ತಿದ್ದಾರೆ, ಅಮಿತ್ ಷಾ ಒಬ್ಬ ಜೈನ ನಾನು ಇವರೆಲ್ಲರಿಗಿಂತ ಉತ್ತಮ ಹಿಂದೂ, ಬಿಜೆಪಿಯವರಿಗೆ ಮಾನವೀಯತೆಯೇ ಇಲ್ಲ ಎಂದು ದೂರಿದರು.

ಬಿಜೆಪಿಯವರಿಗೆ ಸಂವಿಧಾನದ ಬೆಲೆಯೇ ಗೊತ್ತಿಲ್ಲ, ಸಂವಿಧಾನ ಬದಲಾಯಿಸುತ್ತೇವೆ ಅಂತ ಅನಂತ್ ಕುಮಾರ್ ಹೆಗಡೆ ಹೇಳುತ್ತಾರೆ, ಈ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ ಅಂತ ಅಮಿತ್ ಷಾ ಹೇಳುತ್ತಾರೆ. ಅನಂತ್ ಕುಮಾರ್ ಹೆಗಡೆ ಒಬ್ಬ ಕೇಂದ್ರ ಸಚಿವ ಮೋದಿಯವರಿಗೆ, ಅಮಿತ್ ಷಾ ಗಮನಕ್ಕೆ ಬಾರದಂತೆ ಹಾಗೆ ಮಾತಾಡಕ್ಕಾಗಲ್ಲ, ಇದೆಲ್ಲ ಬಿಜೆಪಿಯವರ ಹಿಡನ್ ಅಜೆಂಡಾ ಎಂದು ಆರೋಪಿಸಿದರು.

ಯಡಿಯೂರಪ್ಪ ಮಹಾಭ್ರಷ್ಟ, ಸ್ವತಃ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ನಾವು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟವರು, ಅಭಿವೃದ್ಧಿ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರೋರು ನಾವು, ನಮ್ಮದು ಸ್ಥಿರ ಸರ್ಕಾರ, ಭ್ರಷ್ಟಾಚಾರ ರಹಿತ ಆಡಳಿತ ಐದು ವರ್ಷನೀಡಿದ್ದೇವೆ.

ಈ ಚುನಾವಣೆಯಲ್ಲಿ ಜೆಡಿಎಸ್ ನವರು ಅವಕಾಶವಾದಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರದ್ದು ಅಧಿಕಾರ ಹಿಡಿಯುವ ಕನಸು, ಕುಮಾರಸ್ವಾಮಿ ಮಾತುಕೊಟ್ಟಂತೆ ನಡೆದುಕೊಳ್ಳಲಿಲ್ಲ, ವಚನ ಭ್ರಷ್ಟರಾರು. ಮಾಜಿ ಪ್ರಧಾನಿ ದೇವೇಗೌಡರು ಒಂದು ಪಕ್ಷದ ಅಧ್ಯಕ್ಷರು ನನ್ನನ್ನು ಸೋಲಿಸಬೇಕು ಅಂತ ಅವರು ಬಯಸುವುದರಲ್ಲಿ ತಪ್ಪೇನು? ಸೋಲಿಸ್ತೀನಿ ಸೋಲಿಸ್ತೀನಿ ಅನ್ನೋದು ಬರೀ ಭ್ರಮೆ ಅಷ್ಟೇ, ನಾನು ಜನರ ಮೇಲೆ ನಂಬಿಕೆ ಇಟ್ಟವನು, ಬೇರೆ ಪಕ್ಷದವರು ಏನಂತಾರೆ ಅಂತ ನಾನು ತಲೆ ಕೆಡಿಸಿಕೊಳ್ಳಲ್ಲ.

ಬದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ನಾಳೆ ಬೆಳಿಗ್ಗೆ ತೀರ್ಮಾನ ಮಾಡುತ್ತೇನೆ, ಬದಾಮಿಯಲ್ಲಿ ನನ್ನ ಸ್ಪರ್ಧೆಗೆ ಒತ್ತಾಯ ಬರ್ತಿದೆ, ಎಲ್ಲ ಬೆಳವಣಿಗೆಗಳನ್ನೂ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ, ಎರಡೂ ಕ್ಷೇತ್ರದಲ್ಲಿ ನಿಲ್ಲುವ ಸಂದರ್ಭ ಬಂದರೆ, ಎರಡರಲ್ಲೂ ಗೆಲ್ಲುತ್ತೇನೆ. ಗೆದ್ದ ಮೇಲೆ ಯಾವ ಕ್ಷೇತ್ರ ಬಿಟ್ಟು ಕೊಡಬೇಕೆಂದು ನಿರ್ಧಾರ ತಗೋತೇನೆ ಎಂದು ಹೇಳಿದರು.

ಸಿಎಂ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ತಮ್ಮ ಫೇಸ್ ಬುಕ್ ನಲ್ಲಿ ಏಪ್ರಿಲ್ 23ಕ್ಕೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಂದು ಬರೆದುಕೊಂಡಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

siddaramaiah Reporters ಚಾಮುಂಡೇಶ್ವರಿ ಸಂವಾದ