ಕಾಂಗ್ರೆಸ್ ಗೆ ತಲೆನೋವಾದ ಬಂಡಾಯದ ಬಿಸಿ


17-04-2018 541

ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ವಂಚಿತರನ್ನು ಸಮಾಧಾನಪಡಿಸುವುದು ಇದೀಗ ಬಹುದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಬಂಡಾಯ ಚುನಾವಣಾ ಸಮಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುವ ಕಾರಣದಿಂದ ಬಂಡಾಯ ಎದ್ದಿರುವವರನ್ನು ಸಮಾಧಾನಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಗೆಲುವಿನ ಮಾನದಂಡ ಇಟ್ಟುಕೊಂಡು ಟಿಕೆಟ್ ನೀಡಲಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಸೂಕ್ತ ಸ್ಥಾನಮಾನ ನೀಡುತ್ತೇವೆ. ಬಂಡಾಯ ಬೇಡ ಎಂದು ಕಾಂಗ್ರೆಸ್ ಮುಖಂಡರು ಟಿಕೆಟ್ ಕೈ ತಪ್ಪಿರುವ 12 ಮಂದಿ ಹಾಲಿ ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ನಡೆಸಿದ್ದಾರೆ.

ಇವರಲ್ಲಿ ಬಹು ಮಂದಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದು, ಇವರುಗಳನ್ನು ಸಮಾಧಾನಗೊಳಿಸಿ ಬಂಡಾಯ ಸ್ಪರ್ಧಿ ಆಗದಂತೆ ನೋಡಿಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂದುವರೆಸಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣ ಟಿಕೆಟ್ ಕೈ ತಪ್ಪಿದ್ದಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಳೂರು ಗೋಪಾಲಕೃಷ್ಣ, ಗುಬ್ಬಿಯ ದಿಲೀಪ್‍ಕುಮಾರ್, ಪುತ್ತೂರಿನ ಅಶೋಕ್ ಕುಮಾರ್ ರೈ, ಕಲಘಟಗಿ ಕ್ಷೇತ್ರದಿಂದ ಸಿ.ಎಮ್.ನಿಂಬಣ್ಣ, ಮಹಾಲಕ್ಷ್ಮಿ ಲೇಔಟ್‍ನಿಂದ ನಾಗರಾಜು, ಕಲ್ಬೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಶಿಶಿರು ನಮೋಷಿ, ಯಾದಗಿರಿ ಕ್ಷೇತ್ರದ ಟಿಕೆಟ್ ಬಯಸಿದ್ದ ಶರಣ ಗೋಪಾಲರೆಡ್ಡಿ, ಗುರುಮಠ್ಕಲ್‍ನಿಂದ ಟಿಕೆಟ್ ಕೇಳಿದ್ದ ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಗದಗ ಕ್ಷೇತ್ರದ ಟಿಕೆಟ್ ಕೇಳಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು, ಗಂಗಾವತಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಶಿವರಾಮಗೌಡ, ಬೆಳ್ತಂಗಡಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ರಂಜನ್‍ಗೌಡ ಇವರುಗಳು ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದಿದ್ದು, ಇವರ ಬೆಂಬಲಿಗರು ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಟಿಕೆಟ್ ಸಿಗದ ಮುಖಂಡರ ಬಂಡಾಯ ಹಾಗೂ ಆಕ್ರೋಶಗಳು ಬಿಜೆಪಿಗೆ ಸಂಕಷ್ಟ ತಂದಿದೆ.ಈ ಕ್ಷೇತ್ರಗಳಲ್ಲಿ ಫಲಿತಾಂಶ ಏರುಪೇರಾಗಬಹುದು ಎಂಬ ಆತಂಕ ಮುಖಂಡರಲ್ಲಿ ಕಾಡಿದೆ. ಹಾಗಾಗಿಯೇ ಟಿಕೆಟ್ ವಂಚಿತರನ್ನು ಸಮಾಧಾನಗೊಳಿಸುವ ಕೆಲಸವನ್ನು ಮುಖಂಡರು ನಡೆಸಿದ್ದಾರೆ.

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಗರದ ಹೊರವಲಯದ ದೊಡ್ಡಬಳ್ಳಾಪುರದ ರೆಸಾರ್ಟ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನಿನ್ನೆಯಿಂದಲೇ ಪಕ್ಷದ ಕಛೇರಿಯಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಬಿ ಫಾರಂ ನೀಡುವ ಕೆಲಸ ಆರಂಭಿಸಿದ್ದಾರೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಪಕ್ಷಗಳು ನೀಡಿರುವ ಬಿ ಫಾರಂನ್ನು ಸಲ್ಲಿಸಿದರೆ ಮಾತ್ರ ಅವರಿಗೆ ಪಕ್ಷದ ಚಿಹ್ನೆ ಸಿಗುತ್ತದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

congress rebel ನಾಮಪತ್ರ ರೆಸಾರ್ಟ್‍