ಖಳನಟನ ಬಾಮೈದ ಅಪಹರಣ: ಕಿಡ್ನಾಪರ್ಸ್ ಅರೆಸ್ಟ್


12-04-2018 479

ಬೆಂಗಳೂರು: ಹಣದಾಸೆಗಾಗಿ ಬಾಷ್ ಕಂಪನಿಯ ಯೋಜನಾ ವ್ಯವಸ್ಥಾಪಕ ಹಾಗೂ ಖ್ಯಾತ ಖಳನಟ ದಿ.ವಜ್ರಮುನಿ ಭಾಮೈದ ಶಿವಕುಮಾರ್ ಅವರನ್ನು ಅಪಹರಿಸಿ 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅವರ ಸ್ನೇಹಿತ ಸೇರಿ 6 ಮಂದಿ ಅಪಹರಣಕಾರರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ಶಿವಕುಮಾರ್ ಅವರನ್ನು ಯಾವುದೇ ಅಪಾಯವಿಲ್ಲದೇ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರಕೆರೆಯ ಸತ್ಯವೇಲಾಚಾರಿ ಅಲಿಯಾಸ್ ಸತ್ಯ (24), ಕೋಲಾರದ ಕಾರಂಜಿ ಕಟ್ಟೆಯ ಯಶ್ವಂತ್ ಯಾದವ್ ಅಲಿಯಾಸ್ ಯಶು (20), ಶ್ರೀನಿವಾಸಪುರದ ವಿನೋದ್ ಕುಮಾರ್ ಅಲಿಯಾಸ್ ವಿನೋದ್ (21), ಸಂಜಯ್‍ರೆಡ್ಡಿ ಅಲಿಯಾಸ್ ಕಿಚ್ಚಾ (20), ಶೇಖರ್ ಅಲಿಯಾಸ್ ಶೇಖ್ (20), ಮುಳಬಾಗಿಲಿನ ಜಗನ್ ಅಲಿಯಾಸ್ ಜಗನ್ನಾಥ (23) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಏಪ್ರಿಲ್ 8ರಂದು 1.30ರ ವೇಳೆ ಸಿಂಗಸಂದ್ರದ ಸರೋವರ ಅಪಾರ್ಟ್‍ಮೆಂಟ್‍ನಿಂದ ಜೆಪಿ ನಗರದ ಕಡೆಗೆ ಬಂದಿದ್ದ ಶಿವಕುಮಾರ್‍ನನ್ನು ಕಾರಿನಲ್ಲಿ ಅಪಹರಿಸಿ 1 ಕೋಟಿಗೆ ಬೇಡಿಕೆ ಹಣ ಇಟ್ಟಿದ್ದ 6 ಮಂದಿಯನ್ನು ಬಂಧಿಸಿ ಶಿವಕುಮಾರ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಕರೆತರಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.

ಘಟನೆ ವಿವರ: ಶಿವಕುಮಾರ್ ಅವರು ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯಲ್ಲಿ ಅಪಾರ್ಟ್‍ಮೆಂಟ್‍ನ್ನು ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸಿದ್ದರು. ಅದರಲ್ಲಿ ಕೆಲವು ಫ್ಲಾಟ್‍ಗಳನ್ನು ಮಾರಿ ಅದರಿಂದ ಬಂದ ಹಣವನ್ನು ಬ್ಯಾಂಕಿನಲ್ಲಿಟ್ಟಿದ್ದರು. ಇದನ್ನು ತಿಳಿದ ಅವರ ಸ್ನೇಹಿತ ಹಾಗೂ ಪ್ರಕರಣದ ಪ್ರಮುಖ ಆರೋಪಿ ಸತ್ಯವೇಲಾಚಾರಿ ತನಗೆ ಹಣಕಾಸಿನ ಸಮಸ್ಯೆ ಇದ್ದು, ಹಣವನ್ನು ಸಾಲ ಕೊಡುವಂತೆ ಕೇಳಿದ್ದು ಶಿವಕುಮಾರ್ ಹಣ ನೀಡಲು ಒಪ್ಪಿರಲಿಲ್ಲ.

ಇದರಿಂದ ಆಕ್ರೋಶಗೊಂಡ ಸತ್ಯವೇಲಾಚಾರಿ ಶಿವಕುಮಾರ್ ಅವರ ಜೊತೆಯಲ್ಲೇ ಇದ್ದು, ಅವರ ಎಲ್ಲ ವ್ಯವಹಾರಗಳನ್ನು ತಿಳಿದುಕೊಂಡು ಅವರನ್ನು ಅಪಹರಿಸುವ ಸಂಚು ರೂಪಿಸಿ ಐವರ ತಂಡಕಟ್ಟಿಕೊಂಡಿದ್ದ. ಶಿವಕುಮಾರ್ ಮನೆಗೆ ಒಳಾಂಗಣ ವಿನ್ಯಾಸ ಮಾಡಿಸುವ ಗುತ್ತಿಗೆದಾರ ಬೇಕಾಗಿದ್ದು, ಅದನ್ನು ತಿಳಿದ ಆರೋಪಿ ಅವರಿಗೆ ತಾಜ್‍ಮಿಲ್ ಪಾಷ ಎಂಬುವ ಗುತ್ತಿಗೆದಾರನನ್ನು ಪರಿಚಯಿಸಿದ್ದ. ಅದರಂತೆ ಕಳೆದ ಭಾನುವಾರ ಮಧ್ಯಾಹ್ನ ಶಿವಕುಮಾರ್‍ನನ್ನು ಒಳಾಂಗಣ ವಿನ್ಯಾಸಗಾರ ತಾಜ್‍ಮಿಲ್ ಪಾಷನ ಜೆಪಿನಗರದ ಮನೆಗೆ ಬರುವಂತೆ ಕರೆದಿದ್ದ.

ಕಾರಿನಲ್ಲಿ ಅಪಹರಣ: ಮನೆಯಲ್ಲಿ ಒಳಾಂಗಣ ವಿನ್ಯಾಸಕಾರನ ಬಳಿ ಹೋಗುವುದಾಗಿ ಪತ್ನಿಗೆ ಹೇಳಿ ಬಂದಿದ್ದ ಶಿವಕುಮಾರ್‍ನನ್ನು ಮಾರ್ಗಮಧ್ಯೆ ಕಾರಿನಲ್ಲಿ ಅಪಹರಿಸಿದ್ದ ಸತ್ಯ, ಇನ್ನಿತರ ಆರೋಪಿಗಳು ಕೋಲಾರದ ಹೊರ ವಲಯ, ಆವಣಿ, ಮುಳಬಾಗಿಲು, ಶ್ರೀನಿವಾಸಪುರ ಪ್ರದೇಶಗಳಲ್ಲಿ ಸುತ್ತಾಡಿಸಿ ಅವರ ಪತ್ನಿ ಸುಧಾಗೆ ಶಿವಕುಮಾರ್‍ನಿಂದಲೇ ಮೊಬೈಲ್ ಕರೆ ಮಾಡಿಸಿ, 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಹಣ ಕೊಡದೆ ಹೋದರೆ ನಿಮ್ಮ ಪತಿಯ ಮೃತದೇಹವನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿ ಸೋಮವಾರ ಸರ್ಜಾಪುರ ಸರ್ಕಲ್‍ಗೆ ಬರುವಂತೆ ತಿಳಿಸಿದ್ದರು. ಅಲ್ಲಿಗೆ ಹೋದ ಸುಧಾ ಅವರು ಎಷ್ಟು ಹೊತ್ತು ಕಾದರು ಆರೋಪಿಗಳು ಬಂದಿರಲಿಲ್ಲ. ಮನೆಗೆ ವಾಪಸ್ ಬಂದ ಸುಧಾಗೆ ಮತ್ತೆ ಕರೆ ಮಾಡಿದ ದುಷ್ಕರ್ಮಿಗಳು ನೀನು ಪೊಲೀಸರ ಸಹಾಯ ಪಡೆಯುತ್ತಿದ್ದು, ನಿನ್ನ ಗಂಡನ ಮೃತದೇಹ ಕಳುಹಿಸುವುದಾಗಿ ಕರೆಯನ್ನು ಕಟ್ ಮಾಡಿದ್ದರು.

ಪೊಲೀಸರಿಗೆ ದೂರು: ಇದರಿಂದ ಗಾಬರಿಗೊಂಡ ಸುಧಾ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ದೂರನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಡಾ.ಬೋರಲಿಂಗಯ್ಯ ಅವರು ಶಿವಕುಮಾರ್ ಪತ್ತೆಗಾಗಿ 3 ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು. ತಂಡದಲ್ಲಿದ್ದ ಇನ್ಸ್ಪೆಕ್ಟರ್ಗಳಾದ ಚೇತನ್ ಕುಮಾರ್, ಬೋಳೆತ್ತಿನ, ಗಿರಿರಾಜ್, ಮಂಜುನಾಥ್ ಅವರು ಕಾರ್ಯಾಚರಣೆಗಿಳಿದು ಮೊಬೈಲ್ ಟ್ರ್ಯಾಕ್ ಮಾಡಿ ತಂತ್ರಜ್ಞಾನದ ಸಹಾಯದಿಂದ ಚೆಕ್‍ ಪೋಸ್ಟ್ಗಳಿಗೆ ಮಾಹಿತಿ ರವಾನಿಸುತ್ತ ಶಿವಕುಮಾರ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಕರೆತಂದಿದ್ದಾರೆ.

ಹಣಕ್ಕಾಗಿ ಇತರ ಆರೋಪಿಗಳ ಜೊತೆ ಕೈಜೋಡಿಸಿ ಶಿವಕುಮಾರ್ ಅವರನ್ನು ಅಪಹರಿಸಿಕೊಂಡು ಹೋಗಿ ನಗರದ ಹೊರ ವಲಯದಲ್ಲಿಟ್ಟುಕೊಂಡು ಬೆದರಿಸಿ ಮನೆಯವರಿಗೆ 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ಆರೋಪಿಯು ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಸೀಮಂತ್ ಕುಮಾರ್ ಸಿಂಗ್ ಅವರು ನಗದು ಬಹುಮಾನ ಘೋಷಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

kidnap Bosh ದಿ.ವಜ್ರಮುನಿ ಅಪಾಯ