ಯಾರು ಗೆಲ್ತಾರೆ ಅಂತ ಜ್ಯೋತಿಷಿಗಳು ಹೇಳ್ತಿದ್ದಾರೆ?


12-04-2018 640

ಕರ್ನಾಟಕದಲ್ಲಿ ಚುನಾವಣೆ ಬಂದಿದೆ. ಎಲ್ಲಾ ಪಕ್ಷಗಳೂ ಭರದಿಂದ ಚುನಾವಣಾ ತಯಾರಿ ನಡೆಸುತ್ತಿವೆ. ಆದರೆ ಯಾರಿಗೆ ಬಹುಮತ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಮತದಾರನ ಕುತೂಹಲವೂ ಜಾಸ್ತಿಯಾಗುತ್ತಿದೆ. ಯಾರಿಗೆ ಒಲಿಯಬಹುದು ಅದೃಷ್ಟ ಲಕ್ಷ್ಮಿ ಎಂದು ಜನ ಊಹಿಸುತ್ತಿದ್ದರೆ. ಜನರಿಗಂತೂ ಗೊತ್ತಿಲ್ಲ. ಹಾಗೆ ನೋಡಿದರೆ ಯಾವ ರಾಜಕೀಯ ವಿಶ್ಲೇಷಕನಿಗೂ ಗೊತ್ತಿಲ್ಲ. ಆದರೆ ಯಾರಿಗಾದರೂ ಫಲಿತಾಂಶ ಗೊತ್ತಿರಬಹುದು ಎಂದಾದಲ್ಲಿ ಅದು ಸಾಧ್ಯ ಬರೀ ಜ್ಯೋತಿಷಿಗಳಿಗೆ ಮಾತ್ರ. ಹಾಗೇ ಸೂಪರ್ ಸುದ್ದಿ ಕರ್ನಾಟಕದ ಕೆಲವು ಪ್ರಖ್ಯಾತ ಜ್ಯೋತಿಷಿಗಳನ್ನು ಮಾತಾಡಿಸಿದಾಗ ಹೊರಬಂದ ಸಂಗತಿ ಕುತೂಹಲಕಾರಿಯಾಗಿದೆ.

ಎಲ್ಲಾ ಜ್ಯೋತಿಷಿಗಳು ಖಾಸಗಿಯಾಗಿ ಅಭಿಪ್ರಾಯ ವ್ಯಕ್ತ ಪಡಿಸುವಾಗ ಯಾವುದೇ ಪಕ್ಷಕ್ಕೂ ಬಹುಮತ ಬರುವುದಿಲ್ಲವೆಂದು ಹೇಳುತ್ತಾರೆ. ಕಾಂಗ್ರೆಸ್ಸಿಗೆ ಹೆಚ್ಚು ಸೀಟ್ ಗಳು ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎನ್ನುತ್ತಾರೆ. ಕೆಲವು ಜ್ಯೋತಿಷಿಗಳ ಪ್ರಕಾರ ಯಡಿಯೂರಪ್ಪ ಅವರ ಮುಖ ಲಕ್ಷಣ ಚೆನ್ನಾಗಿದೆ. ಕುಮಾರಸ್ವಾಮಿ ಮುಖದಲ್ಲಿ ಅಧಿಕಾರದ ಲಕ್ಷಣ ಕಾಣುತ್ತಿಲ್ಲ ಆದರೆ ಜೆಡಿಎಸ್ ಗೆ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳು ಲಭಿಸಬಹುದು ಎಂದೂ ಹೇಳುತ್ತಾರೆ. ಸಿದ್ದರಾಮಯ್ಯ ಅವರಿಗೆ ಪುನಃ ಮುಖ್ಯಮಂತ್ರಿಯಾಗುವ ಭಾಗ್ಯವಿಲ್ಲ ಅವರು ಪರಾಭವ ಹೊಂದುವ ಸಾಧ್ಯತೆ ಇದೆ ಎಂದೂ ಹೇಳುತ್ತಾರೆ. ಇನ್ನು ಕೆಲವು ಜ್ಯೋತಿಷಿಗಳ ಪ್ರಕಾರ ಈಗ ಸ್ಪರ್ಧೆಯಲ್ಲಿರುವ ವ್ಯಕ್ತಿಗಳನ್ನು ಬಿಟ್ಟು ಬೇರೆಯೊಬ್ಬ ಹೊರಗಿನ ವ್ಯಕ್ತಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಯಾವ ಜ್ಯೋತಿಷಿಯೂ ಖಾಸಗಿಯಾಗಿ ಕೇಳಿದಾಗ ಬಿಜೆಪಿ ಗೆಲ್ಲುತ್ತದೆ ಎಂದು ಹೇಳದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಜ್ಯೋತಿಷಿಗಳು ಹೆಚ್ಚು ಹಣ ಕೊಟ್ಟವರ ಪರವಾಗಿ ಜ್ಯೋತಿಷ್ಯ ಹೇಳುತ್ತಾರೆ ಎಂಬ ಮಾತಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಜ್ಯೋತಿಷಿಗಳು ತಮ್ಮ ಜ್ಯೋತಿಷ್ಯದಾಣೆಗೆ ಹೇಳುವುದಾದರೆ ಎಲ್ಲಾ ಪಕ್ಷಗಳ ಭವಿಷ್ಯವೂ ಅತಂತ್ರ ಎಂದು ಹೇಳುತ್ತಿರುವುದು ಅನೇಕ ಹೊಸ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಜ್ಯೋತಿಷಿಗಳ ಮಾತು ಎಷ್ಟು ಸತ್ಯ ಎಷ್ಟು ಸುಳ್ಳು ಎಂದು ತಿಳಿದುಕೊಳ್ಳಲು ಮೇ 15ರ ತನಕ ಕಾಯಬೇಕಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

astrology election ಮುಖ್ಯಮಂತ್ರಿ ಫಲಿತಾಂಶ