ಆಂಧ್ರ ಡಿಸಿಎಂ ಹೇಳಿಕೆಗೆ ಬಿಎಸ್ ವೈ ಗರಂ


09-04-2018 454

ಬೆಂಗಳೂರು: ತೆಲುಗು ಭಾಷಿಕರು ಬಿಜೆಪಿಗೆ ಮತ ನೀಡಬೇಡಿ ಎಂದು ಆಂಧ್ರದ ಡಿಸಿಎಂ ಕೃಷ್ಣಮೂರ್ತಿ ಅವರ ಹೇಳಿಕೆಗೆ ಗಂರ ಆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು, ಅವರು ಯಾರು? ಬಿಜೆಪಿಗೆ ಮತ ನೀಡಬೇಡ ಅನ್ನುವುದಕ್ಕೆ. ಯಾರೋ ಬಂದು ನಾನ್ ಸೆನ್ಸ್  ರೀತಿ ಮಾತನಾಡುತ್ತಾರೆ. ಜನ ಅದಕ್ಕೆ ಸಪೋರ್ಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನಗರದ ಶಿವಾಜಿನಗರ ಕ್ಷೇತ್ರದ ಇಂದು ಆಯೋಜಿಸಿದ್ದ ಆಟೋ ಚಾಲಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಚುನಾವಣಾ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ಸಂದರ್ಭದಲ್ಲಿ ಅಸಮಾಧಾನ, ಮುನಿಸುಗಳು ಸಹಜ. ಇವೆಲ್ಲವೂ ಸರಿ ಹೋಗಲಿದೆ ಎಂದ ಅವರು, ಟಿಕೆಟ್ ಕೈತಪ್ಪಿರುವವರು ಅಸಮಾಧಾನ ಹೊರ ಹಾಕುವುದು ಚುನಾವಣಾ ಸಂದರ್ಭದಲ್ಲಿ ಸಹಜ. ಅಸಮಾಧಾನವನ್ನು ಹೊಂದಿರುವವರನ್ನು ಕರೆಸಿ ಚರ್ಚೆ ಮಾಡಿ, ಸಮಾಧಾನಪಡಿಸಲಾಗುವುದು ಎಂದು ಹೇಳಿದರು.

ಟಿಕೆಟ್ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಮುಖಂಡ ಎನ್.ಆರ್. ರಮೇಶ್ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದ ಅವರು, ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಬಿಜೆಪಿ ಟಿಕೆಟನ್ನು 2 ಕೋಟಿಗೆ ಮಾರಲಾಗಿದೆ ಎಂದು ಪೋಸ್ಟ್ ಮಾಡಿರುವುದು ಸರಿಯಲ್ಲ. ಇದು ಆಧಾರ ರಹಿತ ಎಂದರು.

ಕರಂದ್ಲಾಜೆ ಅವರಿಗೆ ಟಿಕೆಟ್ ಇಲ್ಲ : ಸಂಸದರಿಗೆ ವಿಧಾನಸಭಾ ಚುನಾವಣಾ ಟಿಕೆಟ್ ಇಲ್ಲ. ಶೋಭಾ ಕರಂದ್ಲಾಜೆಗೂ ಕೂಡಾ ಟಿಕೆಟ್ ಇಲ್ಲ ಎಂದು ಬಿಎಸ್ ವೈ ಸ್ಪಷ್ಟಪಡಿಸಿದ್ದಾರೆ. ಶ್ರೀರಾಮುಲುಗೆ ವಿಶೇಷ ಕಾರಣಗಳಿಗಾಗಿ ವಿಧಾನಸಭೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಸಂಸದರಿಗೆ ವಿಧಾನಸಭಾ ಟಿಕೆಟ್ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿರುವುದಾಗಿ ಅವರು ತಿಳಿಸಿದರು.

ಸಂವಾದಲ್ಲಿ ಬಿಎಸ್ವೈಗೆ ಪ್ರಶ್ನೆ : ಸಂವಾದದಲ್ಲಿ ಆಟೋ ಚಾಲಕರಿಂದ ಬಿಎಸ್ ವೈ ಗೆ  ಹಲವು ಪ್ರಶ್ನೆಗಳು ಎದುರಾದವು. ಮೂಲಭೂತ ಸಮಸ್ಯೆಗಳ ನಿವಾರಣೆಗೆ ಆಟೋ ಚಾಲಕರು  ಮನವಿ ಮಾಡಿದರು. ಅನ್ಯಭಾಷಿಕರ ಆಟೋ ಚಾಲಕರ ಹಾವಳಿ ಬೆಂಗಳೂರಲ್ಲಿ ಹೆಚ್ಚಾಗಿದೆ. ಕನ್ನಡದಲ್ಲಿ ಮಾತಾಡದೇ ಬೇರೆ ಭಾಷೆ ಮಾತಾಡುವ ಆಟೋ ಚಾಲಕರು ಹೆಚ್ಚಾಗಿದ್ದಾರೆ.. ಓಲಾ ಮತ್ತು ಊಬರ್ ಟ್ಯಾಕ್ಸಿ ಯಿಂದಾಗಿ ಆಟೋ ಓಡಿಸುವುದು ಕಷ್ಟವಾಗಿದೆ ಎಂದು ಆಟೋ ಚಾಲಕ ಬಾಲಕೃಷ್ಣ ಎಂಬುವರು ಹೇಳಿದರು.

ಆಟೋ ಚಾಲಕರಿಗೆ ಆರೋಗ್ಯದ ದೃಷ್ಟಿಯಿಂದ ರಿಯಾಯಿತಿ ಚಿಕಿತ್ಸೆ ಸೌಲಭ್ಯ ಒದಗಿಸಿಕೊಡಬೇಕು. ವಸತಿ ಸೌಲಭ್ಯ ಕಲ್ಪಿಸಲು ಮನವಿ ಮಾಡಿದರು. ಈ ವೇಳೆ ಬಿಎಸ್ ವೈ ಮಾತನಾಡಿ, ಆಟೋ ಚಾಲಕರು ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಆಟೋ ಖರೀದಿ ಮಾಡಲು ಸಾಧ್ಯವಾಗದ ಚಾಲಕರಿಗೆ ಸರ್ಕಾರದಿಂದ ಆಟೋ ವಿತರಿಸುವ ಯೋಜನೆ ಇದೆ. ಆಟೋ ಮಾಲೀಕರಿಂದ ಆಟೋ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.

ಸಂವಾದದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಯಡಿಯೂರಪ್ಪ ಒಬ್ಬ ಜನ ನಾಯಕ. ಅವರು ತಮಗಾಗಿ ಕೆಲಸ ಮಾಡಿಲ್ಲಾ. ಜನರಿಗಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಗೆ ಯಡಿಯೂರಪ್ಪ ನವರ ಕೊಡುಗೆ ಅಪಾರ. ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಬಾಂಡ್ ಜಾರಿಗೆ ತಂದಿದ್ದರು. ಆದರೆ ಆ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ನಿಲ್ಲಿಸಿದೆ ಎಂದು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

yeddyurappa shobha karandlaje ನಾನ್ ಸೆನ್ಸ್ ನಿಶ್ಚಿತ