ಈ ಬಾರಿ ಇವಿಎಂ ಜೊತೆಗೆ ವಿವಿಪ್ಯಾಟ್


29-03-2018 760

ಬೆಂಗಳೂರು: ಬರುವ ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾನದ ವೇಳೆ ವಿವಿಪ್ಯಾಟ್ (ಮತ ಖಾತರಿ ಯಂತ್ರ) ಬಳಕೆ ಆಗಲಿದ್ದು, ಮತದಾನದ ನಂತರದ ಕೆಲ ಅನುಮಾನಗಳನ್ನು ಇದು ಪರಿಹರಿಸಲಿದೆ.

ರಾಜ್ಯದಲ್ಲಿ ಕಳೆದ ವರ್ಷ ನಡೆದ ಎರಡು ಉಪಚುನಾವಣೆ ಸಂದರ್ಭ ವಿವಿಪ್ಯಾಟ್ ಯಂತ್ರವನ್ನು ಬಳಸಲಾಗಿತ್ತು. ಈ ಬಾರಿ ಇವಿಎಂ ಜತೆ ವಿವಿ ಪ್ಯಾಟ್ ಎಲ್ಲೆಡೆ ಬಳಕೆಯಾಗಲಿದೆ. ರಾಜ್ಯದ 224 ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ ಇದನ್ನು ಬಳಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ವಿದ್ಯುನ್ಮಾನ ಮತಯಂತ್ರಗಳ ಬಗೆಗಿನ ಸಂದೇಹ ನಿವಾರಿಸುವ ಸಲುವಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಗಳನ್ನು ಮತಗಟ್ಟೆಗಳಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಮತದಾರರು ಚಲಾಯಿಸಿದ ಮತವು ಯಾವ ಅಭ್ಯರ್ಥಿ ಮತ್ತು ಚಿಹ್ನೆಗೆ ಚಲಾವಣೆ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ. ಮತದಾರರು ಚಲಾಯಿಸಿದ ಮತವು ಯಾವ ಅಭ್ಯರ್ಥಿ ಮತ್ತು ಚಿಹ್ನೆಗೆ ಚಲಾವಣೆ ಆಗಿದೆ ಎಂಬುದು ವಿವಿಪ್ಯಾಟ್ ಮುದ್ರಿತ ಪತ್ರಿಕೆಯಲ್ಲಿ ಕಾಣಲಿದೆ. ಅಲ್ಲದೆ 7 ಸೆಕೆಂಡುಗಳವರೆಗೆ ವೀಕ್ಷಣೆಗೆ ಲಭ್ಯವಿರಲಿದೆ. ಹೀಗಾಗಿ, ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ. ಮತದಾರರು ವಿವಿಪ್ಯಾಟ್‍ನಲ್ಲಿ ಮುದ್ರಿತವಾಗುವ ಪ್ರತಿಯನ್ನು ಪಡೆಯಲು ಮಾತ್ರ ಅವಕಾಶವಿರುವುದಿಲ್ಲ.

ಮತದಾರ ತಾನು ಆಯ್ಕೆ ಮಾಡಬೇಕಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದರೆ ಸಾಕು ಮತಯಂತ್ರದ ಪಕ್ಕದಲ್ಲಿಯೇ ಇಡಲಾಗುವ ಮತ ಖಾತರಿಪಡಿಸುವ ವೋಟರ್ ವೆರಿಫೈಡ್ ಪೇಪರ್ ಆಡಿಟ್ (ವಿವಿ ಪ್ಯಾಟ್) ಯಂತ್ರದಲ್ಲಿ ನಾವು ಮತ ಹಾಕಿದ ಅಭ್ಯರ್ಥಿಯ ಹೆಸರಿನಲ್ಲಿ ಪ್ರಿಂಟ್ ಆದ ಚೀಟಿ ಮತದಾನದ ಪೆಟ್ಟಿಗೆಯಲ್ಲಿ ಬೀಳುತ್ತದೆ. ಆಗ ಮತದಾರ ತಾನು ಚಲಾಯಿಸಿದ ಮತ ಸರಿಯಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು.

ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ನಡೆಸಿದ ವಿದ್ಯುನ್ಮಾನ ಮತಯಂತ್ರ(ಇವಿಎಂ) ಹಾಗೂ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಯಶಸ್ವಿಯಾಗಿದೆ. ಈ ಮಷಿನ್‍ಗಳಿಗೆ ಸ್ವಯಂಚಾಲಿತ ಪ್ರಿಂಟರ್ ಇದ್ದು, ಮತದಾರ ಬಟನ್ ಒತ್ತಿದ ಕೂಡಲೇ ಮತದಾರ ಹಾಗೂ ಅಭ್ಯರ್ಥಿಯ ಹೆಸರಿರುವ ಚೀಟಿ ಬರುತ್ತದೆ. ಅದನ್ನು ಮತ ಎಣಿಕೆ ಸಂದರ್ಭ ಎಣಿಕೆ ಮಾಡಿ ವಿವಿಪ್ಯಾಟ್ ಹಾಗೂ ಇವಿಎಂ ಮತದಾನದ ಸಾಮ್ಯತೆ ಪರಿಶೀಲಿಸುವ ಇರಾದೆ ಕೂಡ ಚುನಾವಣಾ ಆಯೋಗ ಹೊಂದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಜೆಡಿಎಸ್ ನಾಯಕರು ಇವಿಎಂ ಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ನಗರ ಸೇರಿದಂತೆ ರಾಜ್ಯದೆಲ್ಲೆಡೆ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.

ಇವಿಎಂಗೆ ಜೋಡಣೆ: ವಿವಿಪ್ಯಾಟ್‍ಗಳನ್ನು ಮತಯಂತ್ರಗಳಿಗೆ ಜೋಡಿಸಲಾಗಿರುತ್ತದೆ. ಇವಿಎಂನಲ್ಲಿ ಮತದಾನ ಮಾಡುತ್ತಿದ್ದಂತೆ ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ತೋರಿಸುವ ಚೀಟಿಯೊಂದು ವಿವಿಪ್ಯಾಟ್‍ನಲ್ಲಿ ಕಾಣಿಸಿಕೊಳ್ಳುತ್ತದೆ. ವಿವಿ ಪ್ಯಾಟ್‍ನ ಗ್ಲಾಸಿನೊಳಗಿನಿಂದ ಮತದರಾರರು ಈ ಚೀಟಿಯನ್ನು 7 ಸೆಕೆಂಡ್‍ಗಳ ಕಾಲ ನೋಡಬಹುದಾಗಿದೆ. ನಂತರ ಇದು ಬಾಕ್ಸಿನೊಳಗೆ ಬೀಳುತ್ತದೆ. ಒಂದೊಮ್ಮೆ ಮತ ಎಣಿಕೆ ವೇಳೆ ಮತಯಂತ್ರದಲ್ಲಿ ದೋಷವುಂಟಾದಲ್ಲಿ, ಗೊಂದಲಗಳು ಕಂಡು ಬಂದಲ್ಲಿ ವಿವಿಪ್ಯಾಟ್ ಬಾಕ್ಸ್‍ ನಲ್ಲಿ ದಾಖಲಾದ ಮತಗಳನ್ನು ಚುನಾವಣಾಧಿಕಾರಿ ಅನುಮತಿಯೊಂದಿಗೆ ಸಿಬ್ಬಂದಿ ತಕ್ಷಣಕ್ಕೆ ಎಣಿಕೆ ಮಾಡಬಹುದಾಗಿದೆ. ಹೀಗಾಗಿ ಯಾವುದೇ ಗೊಂದಲಗಳಿಗೂ ಇಲ್ಲಿ ಅವಕಾಶವಿಲ್ಲ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

EVM Voting ವಿವಿ ಪ್ಯಾಟ್ ಚುನಾವಣಾ ಆಯೋಗ