ತೀರ್ಪು ಕಾಯ್ದಿರಿಸಿದ ಸ್ಪೀಕರ್


21-03-2018 600

ಬೆಂಗಳೂರು: ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ವಿಚಾರದಲ್ಲಿ ವಿಚಾರಣೆ ಪೂರ್ಣಗೊಳಿಸಿರುವ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ತೀರ್ಪು ನೀಡುವ ಕುರಿತಂತೆ ಮೊದಲು ಹೈ ಕೋರ್ಟ್ ತೀರ್ಪು ನೀಡಲಿ. ನಂತರ ತಮ್ಮ ನಡೆಯನ್ನು ನಿರ್ಧರಿಸುವುದಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಪು ನೀಡುವುದು ತಮ್ಮ ಪರಮಾಧಿಕಾರ. ನ್ಯಾಯಾಲಯ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದಿದ್ದಾರೆ. ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ತೀರ್ಪಿಗೆ ಸಂಬಂಧಿಸಿದಂತೆ ಹೈಕೋರ್ಟಿನಿಂದ ತಮಗೆ ಯಾವುದೇ ನೋಟಿಸ್ ಬಂದಿಲ್ಲ. ಲಿಖಿತ ಸೂಚನೆ ಬಂದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಅನರ್ಹತೆ ವಿಚಾರದಲ್ಲಿ ನನ್ನ ತೀರ್ಪನ್ನು ಕಾಯ್ದಿರಿಸಿದ್ದೇನೆ. ನಾನು ಇಂದೇ ತೀರ್ಪು ನೀಡಬಹುದು, ನಾಳೆ ನೀಡಬಹುದು. ತೀರ್ಪು ಪ್ರಕಟಿಸದೆಯೂ ಇರಬಹುದು. ಯಾಕೆಂದರೆ ಇದು ನನ್ನ ಪರಮಾಧಿಕಾರ. ಕಾನೂನಾತ್ಮಕವಾಗಿ ನನ್ನ ಕೆಲಸ ನಾನು ಮಾಡುತ್ತೇನೆ. ಸಂವಿಧಾನದ ಪ್ರಕಾರ ನಾನು ಅಧಿಕಾರ ಚಲಾವಣೆ ಮಾಡಿದ್ದೇನೆ. ಶಾಸಕರ ಅನರ್ಹತೆ ವಿಷಯವಾಗಿ ಹೈಕೋರ್ಟ್ ಹಸ್ತಕ್ಷೇಪ ಮಾಡಬಾರದು. ಈ ವಿಷಯ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಂವಿಧಾನದಲ್ಲಿಯೇ ತಿಳಿಸಲಾಗಿದೆ ಎಂದರು.

ಅಡ್ವೋಕೇಟ್ ಜನರಲ್ ಮಧುಸೂಧನ್ ನಾಯಕ್, ಹೆಚ್ಚುವರಿ ಅಡ್ವೋಕೇಟ್ ಜನರಲ್ ಪೊನ್ನಣ್ಣ ನನ್ನನ್ನು ಭೇಟಿ ಮಾಡಿದ್ದರು. ಅವರು ಸರ್ಕಾರದ ವಕೀಲರು. ಬೇರೆ, ಬೇರೆ ವಿಷಯ ಚರ್ಚಿಸಿದ್ದಾರೆ. ನಾನು ಈ ವಿಷಯ ಕುರಿತಂತೆ ಯಾವುದೇ ವಕೀಲರನ್ನು ನೇಮಕ ಮಾಡಿಕೊಂಡಿಲ್ಲ. ಸಂವಿಧಾನದ ಪ್ರಕಾರ ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಜೆಡಿಎಸ್‍ನವರು ತೀರ್ಪು ಕೊಡಿ ಎಂದು ಹೇಳಿದ ಕೂಡಲೇ ಕೊಡುವುದಕ್ಕೆ ಆಗುವುದಿಲ್ಲ. ನನ್ನ ಅಧಿಕಾರದಲ್ಲಿ ನಾನು ತೀರ್ಪು ನೀಡುತ್ತೇನೆ ಎಂದು ಹೇಳಿದರು.

ಈ ಮಧ್ಯೆ ಜೆಡಿಎಸ್‍ನ ಬಂಡಾಯ ಶಾಸಕ ಬಾಲಕೃಷ್ಣ, ಜೆಡಿಎಸ್ ವರಿಷ್ಠರ ಮನೋಸ್ಥಿತಿ ನಮಗೆ ಅರ್ಥ ಆಗುತ್ತಿಲ್ಲ. ಒಂದೆಡೆ ನಮ್ಮ ಸದಸ್ಯತ್ವ ರದ್ದುಗೊಳಿಸುವಂತೆ ಒತ್ತಾಯ ಮಾಡುತ್ತಾರೆ. ಇನ್ನೊಂದೆಡೆ ರಾಜ್ಯಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವಂತೆ ವಿಪ್ ನೀಡಿದ್ದಾರೆ. ಏನೇ ಇರಲಿ ಎಚ್.ಡಿ.ದೇವೇಗೌಡ ಹಾಗೂ ಕುಮಾರ ಸ್ವಾಮಿ ಕರೆದರೆ ನಾವು ಮಾತುಕತೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ವರಿಷ್ಠರು ಯಾವುದಾದರೂ ಒಂದು ನಿಲುವಿಗೆ ಅಂಟಿಕೊಳ್ಳಲಿ. ನಮ್ಮನ್ನು ಬೇಡ ಎಂದು ತೀರ್ಮಾನಿಸಲಿ, ನಮ್ಮನ್ನು ಪಕ್ಷದಿಂದ ಹೊರ ಹಾಕಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದರು.  ವಿಪ್ ಜಾರಿ ಮಾಡಿದ ಮೇಲೆ ನಾವು ಏಳೂ ಜನರೂ ಸಹ ಯೋಚನೆ ಮಾಡಿ ಎಲ್ಲರೂ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇನ್ನೂ ಸಮಯ ಮೀರಿಲ್ಲ. ಯಾವುದಾದರೂ ಒಂದು ಕಡೆ ಅವರು ನಿಲ್ಲಲಿ ಎಂದರು.


ಒಂದು ಕಮೆಂಟನ್ನು ಬಿಡಿ