ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ: ಕೇಂದ್ರಕ್ಕೆ ಶಿಫಾರಸು


19-03-2018 616

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಚರ್ಚೆಗೆ, ಕುತೂಹಲಕ್ಕೆ ಕಾರಣವಾಗಿದ್ದ ಲಿಂಗಾಯತ/ವೀರಶೈವ ಪ್ರತ್ಯೇಕ ಧರ್ಮ ಸ್ಥಾಪನೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಕೊನೆಗೂ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಸುದೀರ್ಘ ಚರ್ಚೆಯ ನಂತರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ಅಂಗೀಕರಿಸಲು ತೀರ್ಮಾನಿಸಲಾಯಿತು.

ಬಸವ ತತ್ವ ಅನುಸರಿಸುವವರಿಗೆ ಪ್ರತ್ಯೇಕ ಧರ್ಮ ರಚಿಸಬೇಕು, ಅಲ್ಪಸಂಖ್ಯಾತರ ಸ್ಥಾನ ಮಾನ ನೀಡಬೇಕೆಂದು ಶಿಫಾರಸು ಮಾಡಲು ಸಂಪುಟ ಸಭೆ ತೀರ್ಮಾನಿಸಿತು. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಗಾಯತ ಮುಖಂಡ ಹಾಗೂ ಸಚಿವ ಎಂ.ಬಿ ಪಾಟೀಲ, ನಮ್ಮ ಹೋರಾಟಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದ್ದು, ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ. ಲಿಂಗಾಯತರು ಹಿಂದೂಗಳಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಕೇಂದ್ರ ಸರಕಾರ ಇದನ್ನು ಅರ್ಥ ಮಾಡಿಕೊಳ್ಳುತ್ತದೆ ಎಂದು ಭಾವಿಸಿರುವುದಾಗಿ ಹೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮವಾಗಿ ಪರಿಗಣಿಸುವುದನ್ನು ಈಗಾಗಲೇ ವಿರೋಧಿಸಿರುವ ಆರ್.ಎಸ್.ಎಸ್ ಇದು ಹಿಂದೂ ಧರ್ಮವನ್ನು ಇಬ್ಭಾಗ ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಲಿಂಗಾಯತರೇ ಬಿಜೆಪಿಗೆ ಬೆನ್ನೆಲುಬಾಗಿರುವುದರಿಂದ ಬಿಜೆಪಿ ಪಕ್ಷ ಈಗ ಗೊಂದಲಕ್ಕೆ ಬಿದ್ದಿದೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಕೂಡ ಲಿಂಗಾಯತರು ಎಂಬುದು ಇಲ್ಲಿ ಗಮನಾರ್ಹ.

ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಸಂಪುಟ ಸಭೆ ವಾದ-ಪ್ರತಿವಾದಗಳಿಗೆ ಸಾಕ್ಷಿಯಾಯಿತು. ಕೆಲವರು ಲಿಂಗಾಯತ ಧರ್ಮ ಎಂದು ಕರೆಯಬೇಕೆಂದು ವಾದಿಸಿದರೆ, ಮತ್ತೆ ಕೆಲವರು ವೀರಶೈವ-ಲಿಂಗಾಯತ ಎನ್ನಬೇಕು ಎಂದು ಪ್ರತಿವಾದ ಮಂಡಿಸಿದರು. ಆದರೆ, ತಜ್ಞರ ಸಮಿತಿ ಮಾತ್ರ ಲಿಂಗಾಯತ ಧರ್ಮ ಎಂದೇ ವರದಿಯಲ್ಲಿ ಉಲ್ಲೇಖಿಸಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

lingayat veerashaiva ಧರ್ಮ ವಾದ-ಪ್ರತಿವಾದ